ಸುಳ್ಳು ಅತ್ಯಾಚಾರ ಕೇಸ್ – ದೂರುದಾರೆ ಸೇರಿ 13 ಜನರಿಗೆ ಜೈಲು

Public TV
1 Min Read

ಬೆಳಗಾವಿ: ಹೆಸ್ಕಾಂ ಸಹಾಯಕ ಇಂಜಿನಿಯರ್ ವಿರುದ್ಧ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದ ದೂರುದಾರೆ ಸೇರಿದಂತೆ 13 ಜನರಿಗೆ ಬೆಳಗಾವಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ 6 ತಿಂಗಳು ಶಿಕ್ಷೆ ವಿಧಿಸಿದೆ.

ಬಿ.ವಿ.ಸಿಂಧು ಸುಳ್ಳು ಕೇಸ್ ದಾಖಲಿಸಿ ಜೈಲು ಸೇರಿದ ಮಹಿಳೆಯಾಗಿದ್ದಾಳೆ. ಅಪರಾಧಿ ಸಿಂಧು ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರರಾದ ತುಕಾರಾಮ್ ಮಜ್ಜಿಗೆಯವರ ವಿರುದ್ಧ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. ಸುಳ್ಳು ಕೇಸ್ ಎಂದು ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆ ದೂರುದಾರೆ ಬಿ.ವಿ ಸಿಂಧು ಸೇರಿ 13 ಜನರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಹದಿಮೂರು ಆರೋಪಿಗಳಿಗೂ ತಲಾ 86ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?: 2014ರ ನವೆಂಬರ್ 19ರಂದು ಮಾಳಮಾರುತಿ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಆರೋಪ ಮಾಡಿ ಕೇಸ್ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಾಳಮಾರುತಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಅತ್ಯಾಚಾರ, ಜೀವ ಬೆದರಿಕೆ ಹಾಕಿದ್ದು ಸುಳ್ಳು ಎಂದು ತನಿಖೆಯಲ್ಲಿ ಬಯಲಾಗಿದೆ.

ಇತರೆ ಅಪರಾಧಿಗಳ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ಕೋರ್ಟ್‍ಗೆ ಸಿಂಧು ಹೇಳಿದ್ದರು. 2017ರಲ್ಲಿ ದೂರುದಾರೆ ಸಿಂಧು ಸೇರಿ 13 ಜನರ ವಿರುದ್ಧ ಮಜ್ಜಗಿ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು.

Share This Article