‘ಕೈ’ ಕೊಟ್ಟ ಮಾವ, ನಡುನೀರಲ್ಲಿ ‘ಅಳಿಯ’!

Public TV
1 Min Read

ಬೆಳಗಾವಿ: ಶಾಸಕನಾಗಲು ಬಯಸಿ ಅಳಿಯ ಚುನಾವಣಾ ಕಣದಲ್ಲಿದ್ದರೆ, ಶಾಸಕತ್ವ ಉಳಿಸಿ ಎಂದು ಮಾವ ದೆಹಲಿ ಸುಪ್ರಿಂಕೊರ್ಟಿನಲ್ಲಿದ್ದಾರೆ. ಮಾವ ಅಳಿಯನ ಪೊಲಿಟಿಕಲ್ ಕಹಾನಿಯ ಎಕ್ಸ್ ಕ್ಲೂಸೀವ್ ಸ್ಟೋರಿ ಇಲ್ಲಿದೆ.

ಹೌದು. ಸಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಗೋಕಾಕ್ ಸಾಹುಕಾರ ಇದೀಗ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ ಸೈಲೆಂಟ್ ಆಗಿದ್ದಾರೆ. ಈ ಮೂಲಕ ಮಾವ ರಮೇಶ್ ಬಿಜೆಪಿ ಸೇರಿ ಮಹಾ ಚುನಾವಣೆಯಲ್ಲಿ ನನಗೆ ಕಮಲದ ಚಿನ್ಹೆ ಕೊಡಿಸಿ ಗೆಲ್ಲಿಸುತ್ತಾರೆ ಎಂಬ ಅಳಿಯ ಅಪ್ಪಿರಾವ್ ಪಾಟೀಲ್ ಅವರ ಆಸೆಗೆ ತಣ್ಣೀರು ಎರಚಲಾಗಿದೆ.

ಅಪ್ಪಿರಾವ್ ಅವರು ಬೆಳಗಾವಿ ನಗರದಿಂದ ಕೇವಲ ಹತ್ತು ಮೈಲಿ ದೂರದಲ್ಲಿರುವ ಮಹಾರಾಷ್ಟ್ರದ ಚಂದ್‍ಗಡ್ ವಿಧಾನಸಭೆಗೆ ಆಯ್ಕೆ ಬಯಸಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಈ ಮೂಲಕ ಶಾಸಕ ಎಂಬ ಮೂರಕ್ಷರದ ಪದವಿ ಪಡೆದು ಮುಂಬೈ ವಿಧಾನಸಭೆ ಪ್ರವೇಶ ಮಾಡಬೇಕೆಂಬ ಬಯಕೆ ಅವರದ್ದಾಗಿದೆ. ಮಾವ ರಮೇಶ್ ಜಾರಕಿಹೊಳಿ ಸಪೋರ್ಟ್ ಹಾಗೂ ಬಿಜೆಪಿ ಬಲವಿಲ್ಲದಿದ್ದರೂ ಅಪ್ಪಿರಾವ್ ಅವರನ್ನೇ ಚಂದ್‍ಗಡ್ ಕ್ಷೇತ್ರದ ಜನ ಅಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

ಅನರ್ಹ ಎಂಬ ಮೂರಕ್ಷರದ ಉರುಳನ್ನು ಜಾಣ್ಮೆಯಿಂದ ಉರುಳಿಸಿದ ಆಗಿನ ಸ್ಪೀಕರ್ ನಡೆಯೂ ಸರಿ- ತಪ್ಪು ಎಂಬ ವಿಷಯದ ವಿಚಾರಣೆ ಸವೋಚ್ಛ ನ್ಯಾಯಾಲಯದಲ್ಲಿದೆ. ಅತ್ತ ಅಳಿಯ ಅಪ್ಪಿರಾವ್ ಅವರ ಚುನಾವಣೆ ಪ್ರಚಾರಕ್ಕೂ ಹೋಗಲಾಗದೆ ಇತ್ತ ಸ್ವಕ್ಷೇತ್ರ ಗೋಕಾಕ್‍ಗೂ ಮರಳದೆ ರಮೇಶ್ ಜಾರಕಿಹೊಳಿ ಅರ್ಧದಾರಿಯಲ್ಲಿ ಅದೃಶ್ಯರಾಗಿದ್ದಾರೆ. ಅನರ್ಹ ಎಂಬ ಪದದಲ್ಲಿನ “ನ” ಎಂಬ ಅಕ್ಷರವನ್ನು ಡಿಲೀಟ್ ಮಾಡಿ ಎಂದು ಬೇಡಿಕೆಯಿಟ್ಟು ದೆಹಲಿಗೆ ಹೋಗಿ ಹೋಗಿ ಸಾಹುಕಾರ್ ಹೈರಾಣಾಗಿದ್ದಾರೆ.

ಪ್ರಯಾಣ ಮಾಡಿ ಮಾಡಿ ಸುಸ್ತಾಗಿ ರಮೇಶ್ ಜಾರಕಿಹೊಳಿ ಇದೀಗ ಕೊಚ್ಚಿಯ ನಿಸರ್ಗ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ. ಈ ಸಂದರ್ಭವನ್ನೇ ಬಳಸಿಕೊಂಡು ಅನರ್ಹ ಶಾಸಕ ರಮೇಶ್ ಅಮೇರಿಕ ಪ್ರವಾಸದಲ್ಲಿದ್ದಾರೆ ಎಂದು ಹೇಳಿ, ಸಹೋದರ ಸತೀಶ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಒಟ್ಟಾರೆ ರಮೇಶ್ ಅವರು ಅಳಿಯನ ಅಳಲು, ಕ್ಷೇತ್ರದ ಜನರ ಅಹವಾಲು ಹಾಗೂ ಸಹೋದರರ ರಾಜಕೀಯ ತಂತ್ರಕ್ಕೆ ತಲ್ಲಣಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *