ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಹಲ್ಲೆ – ಈಗ ನಿರ್ವಾಹಕನ ಮೇಲೆಯೇ ಪೋಕ್ಸೋ ಕೇಸ್‌ ದಾಖಲು

Public TV
2 Min Read

ಬೆಂಗಳೂರು: ಕನ್ನಡದಲ್ಲಿ (Kannada) ಮಾತನಾಡು ಎಂದಿದ್ದಕ್ಕೆ ನಿರ್ವಾಹಕನ (Conductor) ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಈಗ ನಿರ್ವಾಹಕ ಮಹಾದೇವ್‌ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ (POCSO Case) ದಾಖಲಾಗಿದೆ.

ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕನ್ನಡ ಮಾತನಾಡಿ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮಹಾದೇವ್‌ ಆರೋಪಿಸಿದ್ದರು. ಆ ದೂರನ್ನಾಧರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಇಂದು ನಸುಕಿನ ಜಾವ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ. ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ತುಂಬಿದ್ದ ಬಸ್‌ನಲ್ಲಿ ಬಾಲಕಿಯನ್ನ ಕೆಟ್ಟ ದೃಷ್ಟಿಯಿಂದ ನೋಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

ಪೋಕ್ಸೋ ಪ್ರಕರಣ ದಾಖಲಾದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಮಹಾದೇವ್‌ ಅವರು, ನನಗೆ ದೂರು ನೀಡಿದ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಏನಿದು ಘಟನೆ?
ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಟಿಕೆಟ್‌ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾದೇವ್‌, ಬಿಕೆ ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ದರು. ಯುವತಿ ಎರಡು ಫ್ರೀ ಟಿಕೆಟ್‌ ಎಂದು ಹೇಳಿ ಟಿಕೆಟ್‌ ಪಡೆದಳು. ಯುವಕ ಟಿಕೆಟ್‌ ಪಡೆದಿರಲಿಲ್ಲ. ಈ ವಿಚಾರಕ್ಕೆ ನಾನು ಪ್ರಶ್ನೆ ಮಾಡಿದ್ದೆ. ನೀವು ಟಿಕೆಟ್​ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಎಂದು ಆಕೆ ತಿಳಿ ಹೇಳಿದ್ದೆ. ಈ ಸಂದರ್ಭದಲ್ಲಿ ಆಕೆ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೇ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ತಲೆ, ಮೈ, ಕೈಗೂ ಹೊಡೆದಿದ್ದಾರೆ ಎಂದು ತಿಳಿಸಿದರು.

Share This Article