ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಒಂದು ದಿನ ಬಾಕಿ ಇದ್ದು, ಆದರೆ ಫಲಿತಾಂಶಕ್ಕೂ ಮುನ್ನವೇ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸದರಾಗಿದ್ದಾರೆ.
ಹೌದು, ಮಂಡ್ಯದ ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸಂಸದರು ಎಂದು ಹಾಕಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಮದುವೆಗೆ ವಿಶೇಷ ಆಹ್ವಾನಿತರು ನಿಖಿಲ್ ಕುಮಾರಸ್ವಾಮಿರವರು, ಸಂಸದರು, ಮಂಡ್ಯ ಜಿಲ್ಲೆ ಎಂದು ಹೆಸರು ಮತ್ತು ಫೋಟೋ ಹಾಕಿಸಿದ್ದಾರೆ.
ಜೂ.9 ರಂದು ಶ್ರೀರಂಗಪಟ್ಟಣದಲ್ಲಿ ಮದುವೆ ನಡೆಯಲಿದ್ದು, ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಚುನಾವಣೆಯಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ಆಗಿರುವ ನಿಖಿಲ್ ಅವರ ನಡುವೆ ಬಿಗ್ ಫೈಟ್ ನಡೆದಿದ್ದು, ಫಲಿತಾಂಶ ಏನಾಗಲಿದೆ ಎಂಬುವುದರ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ.
ಇತ್ತ ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಿಖಿಲ್ ಅವರು, ಒಂದೊಂದು ಸರ್ವೆಗಳಲ್ಲಿ ಒಂದೊಂದು ರೀತಿ ಫಲಿತಾಂಶ ಬಂದಿದೆ. ನಾನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.