ಬಜೆಟ್ ಅಧಿವೇಶನದಿಂದ ನಮ್ಮ ಪಾದಯಾತ್ರೆಯನ್ನ ಎರಡು ದಿನ ಕಡಿತಗೊಳಿಸಿ ಇಂದೇ ಮುಕ್ತಾಯಗೊಳಿಸುತ್ತಿದ್ದೇವೆ: ಸಿದ್ದು

Public TV
3 Min Read

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯ ಕೊನೆ ದಿನ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಳೆ ಬಜೆಟ್ ಅಧಿವೇಶನ ಇರುವುದರಿಂದ ನಮ್ಮ ಪಾದಯಾತ್ರೆಯನ್ನು ಎರಡು ದಿನ ಕಡಿತಗೊಳಿಸಿ ಇಂದೇ ಮುಕ್ತಾಯಗೊಳಿಸುತ್ತಿದ್ದೇವೆ. ರಾಮನಗರದಿಂದ ಬೆಂಗಳೂರಿನವರೆಗೆ ನಮ್ಮ ಪಾದಯಾತ್ರೆಗೆ ಜನ ಅತಿ ಹೆಚ್ಚು ಬೆಂಬಲ ನೀಡಿದ್ದಾರೆ. ನಮ್ಮೊಂದಿಗೆ ನಿಂತ ಎಲ್ಲರಿಗೂ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಇದನ್ನೂ ಓದಿ: ಕೊರೊನಾ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

ಶಿವರಾತ್ರಿ ದಿನ ಜನ ಕಡಿಮೆ ಸೇರಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಅಂದೇ ಅತಿ ಹೆಚ್ಚು ಜನ ಸೇರಿದ್ದರು. ಅಂದರೆ ಹೋರಾಟದ ಮಹತ್ವ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದರ್ಥ. ಕಾಂಗ್ರೆಸ್ ಅವರು ತೂಕ ಇಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ, ಬೆಂಗಳೂರು ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಮಾಡುತ್ತಿದ್ದಾರೆ ಎಂಬೆಲ್ಲಾ ಟೀಕೆಗಳನ್ನು ಬಿಜೆಪಿ ಅವರು ಮಾಡಿದ್ದರು. ಆ ಎಲ್ಲ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ ಎಂದರು.

ಕಾವೇರಿ ವಿವಾದದ ಅಂತಿಮ ತೀರ್ಪು ಬಂದ ನಂತರ ನಾವು ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕಾಯಿತು. ಇದಲ್ಲದೆ ಕಳೆದ ಏಳು ವರ್ಷಗಳಲ್ಲಿ ಮಳೆಗಾಲ ಹಾಗೂ ಇನ್ನಿತರ ಸಮಯದಲ್ಲಿ ಒಟ್ಟು 582 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿನ ಸಮುದ್ರ ಸೇರಿದೆ. ಹೀಗೆ ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ ನೀರನ್ನು ನಾವು ಸದುಪಯೋಗ ಮಾಡಿಕೊಂಡರೆ ಏನು ತಪ್ಪು? ಈ ಹಿಂದೆಯೂ ನಾವು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದೆವು. ಅದರಿಂದ ಕೆಲವರು ಜೈಲು ಸೇರಿದ್ರು, ಅಕ್ರಮ ಗಣಿಗಾರಿಕೆ ನಿಂತಿತು ಎಂದು ಹೆಮ್ಮೆಯಿಂದ ಹೇಳಿದರು

ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎರಡು ಪಾದಯಾತ್ರೆ ಮಾಡಿದ್ದೆವು. ಮೊದಲನೆಯದು ಉಳ್ಳಾಲದಿಂದ ಉಡುಪಿ ವರೆಗೆ ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಎಂಬ ಪಾದಯಾತ್ರೆ ಮಾಡಿದ್ದೆವು. ಇಂದು ರಾಜ್ಯದ ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆಯಾಗಿದೆ. ಗಲಭೆಗಳು ನಿರಂತರವಾಗಿ ನಡೆಯುತ್ತಿದೆ, ಕೊಲೆಗಳಾಗುತ್ತವೆ ಎಂದು ತಿಳಿಸಿದರು.

ಎರಡನೆಯದು ಹೊಸಪೇಟೆಯಿಂದ ಸಂಗಮದ ವರೆಗೆ ಪಾದಯಾತ್ರೆ ಮಾಡಿದ್ವಿ. ಅದನ್ನು ಕೂಡ ತಿರುಚಿ ಅಪಪ್ರಚಾರ ಮಾಡಿದ್ರು. ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಖರ್ಚು ಮಾಡ್ತೀವಿ ಎಂಬ ಭರವಸೆ ನೀಡಿದ್ದೆವು. ಅದನ್ನ ತಿರುಚಿ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಕೊಡುತ್ತೀನಿ ಅಂದಿದ್ರು ಎಂದು ಸುಳ್ಳು ಪ್ರಚಾರ ಮಾಡಿದ್ರು ಎಂದರು.

ಬಿಜೆಪಿ ಅವರು ಐದು ವರ್ಷದಲ್ಲಿ ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂಬುದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಅಂದರೆ ಪ್ರತೀ ವರ್ಷ ಕನಿಷ್ಠ ರೂ. 30,000 ಕೋಟಿ ಖರ್ಚು ಮಾಡಬೇಕು. ಆದರೆ ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ ರೂ. 40,000 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಿದೆ. ಇಂಥವರಿಗೆ ನಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡೋಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಮೇಕೆದಾಟು ಜಾರಿಯಾದ್ರೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ನೀಡಬಹುದು. ಜೊತೆಗೆ ಬೇಸಿಗೆ ಕಾಲದಲ್ಲಿ ರಾಜ್ಯದ ಹೇಮಾವತಿ, ಹಾರಂಗಿ, ಕೆ.ಆರ್.ಎಸ್ ಮುಂತಾದ ಅಣೆಕಟ್ಟುಗಳಲ್ಲಿ ನೀರಿಲ್ಲದೆ ಹೋದಾಗ ತಮಿಳುನಾಡಿಗೆ ಮೇಕೆದಾಟು ಇಂದು ನೀರು ಹರಿಸಬಹುದು. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಕೊಡಬಹುದು ಎಂದರು.

ಸಮುದ್ರ ಪಾಲಾಗುವ ವ್ಯರ್ಥ ನೀರಿನ ಸದ್ಬಳಕೆ ಇದರಿಂದಾಗುತ್ತೆ. ಇದು ಕೇಂದ್ರ ಸರ್ಕಾರಕ್ಕೆ ಏಕೆ ಅರ್ಥವಾಗ್ತಿಲ್ಲ. ಕುಡಿಯುವ ನೀರಿನ ಯೋಜನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯದಿಂದ ಬಿಜೆಪಿಯ 25 ಜನ ಸಂಸದರು ಆಯ್ಕೆಯಾಗಿ ಸಂಸತ್ತಿಗೆ ಹೋಗಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಕಳೆದ ಮೂರು ವರ್ಷದಲ್ಲಿ ಒಂದು ಪರಿಸರ ಅನುಮತಿ ಪತ್ರ ಪಡೆಯಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಆಗಿಲ್ಲವೇ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕಾರಜೋಳ ಅವರನ್ನು ಕೇಳಿದ್ರೆ ಅದಕ್ಕೆ ಉತ್ತರ ಕೊಡಲ್ಲ. ಅದಕ್ಕೆ ಈ ಸರ್ಕಾರವನ್ನು ಹೇಡಿಗಳ ಸರ್ಕಾರ ಎಂದು ನಾನು ಕರೆದಿದ್ದು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಂದ

ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡಲ್ಲ. ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರಕ್ಕೆ ನೀರು ಕೊಡಬೇಕೋ ಬೇಡವೋ? ರಾಜಕೀಯ ಹೋರಾಟ ಬೇರೆ ಸಮಯದಲ್ಲಿ ಮಾಡ್ತೇವೆ. ಈ ವಿಚಾರದಲ್ಲಿ ಅಲ್ಲ. ಕೋಮುವಾದಿ, ಭ್ರಷ್ಟ, ದುರಾಡಳಿತದಿಂದ ಕೂಡಿರುವ ಈ ಸರ್ಕಾರವನ್ನು ಕಿತ್ತು ಬಿಸಾಕಲು ರಾಜಕೀಯ ಹೋರಾಟವೂ ಅಗತ್ಯವಿದೆ. ಅದನ್ನು ಬಹಿರಂಗವಾಗಿ ಮಾಡುವ ಸಮಯ ಬಂದಾಗ ಮಾಡ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *