ಉಡುಪಿಯಲ್ಲಿ 10 ದಿನ ಬ್ಯೂಟಿ ಪಾರ್ಲರ್ ಬಂದ್

Public TV
1 Min Read

ಉಡುಪಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ 10 ದಿನ ಉಡುಪಿ ಜಿಲ್ಲೆಯ ಬ್ಯೂಟಿ ಪಾರ್ಲರ್ ಗಳು ಬಂದ್ ಆಗಲಿವೆ.

ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷೆ ವೇದ ಸಂಜೀವ್ ಸುವರ್ಣ, ಕೋವಿಡ್ 19 ಮಹಾಮರಿಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಸ್ವಚ್ಛತೆ ಮತ್ತು ಜಾಗೃತಿ ವಹಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ನಮ್ಮ ಸೇವೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲರೂ ಸಹಕರಿಸಬೇಕು. ನಮಗೂ ಕೊರೋನಾ ಬೇಡ- ನಮ್ಮಿಂದ ಕೊರೋನಾ ಹರಡೋದು ಬೇಡ ಎಂದು ಹೇಳುವ ಮೂಲಕ ಜನತಾ ಕರ್ಫ್ಯೂಗೆ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘ ಬೆಂಬಲ ನೀಡಿದೆ.

ಚಿಕ್ಕಬಳ್ಳಾಪುರ ಗೌರಿಬಿದನೂರಿನ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ವ್ಯಕ್ತಿ ಮೆಕ್ಕಾದಿಂದ ಹೈದರಾಬಾದ್ ಮಾರ್ಗವಾಗಿ ಕರ್ನಾಟಕಕ್ಕೆ ಆಗಮಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಶುಕ್ರವಾರದ ವರದಿ ಪ್ರಕಾರ, ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಕೇರಳದ ಕಾಸರಗೋಡಿನಲ್ಲಿ 5 ಹೊಸ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.

ಒಟ್ಟು 185 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್‍ಗೆ ಈವರೆಗೆ ಸುಮಾರು 2,75,953 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 11,399 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 91,912 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,72,642 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *