ಅತ್ಯದ್ಭುತ ವ್ಯೂವ್ ಪಾಯಿಂಟ್ ‘ಎತ್ತಿನ ಭುಜ’ಕ್ಕೆ ಭೇಟಿ ಕೊಟ್ಟು ಪ್ರಕೃತಿಯ ಸೌಂದರ್ಯ ಸವಿಯಿರಿ

Public TV
4 Min Read

ನೀವೇನಾದರೂ ಟ್ರೆಕ್ಕಿಂಗ್ ಮಾಡಲು ಮಲೆನಾಡಿನ ಕಡೆ ಹೋಗುವ ನಿರ್ಧಾರ ಮಾಡಿದ್ದರೆ ಎತ್ತಿನ ಭುಜ (Trekking Place Ettina Bhuja) ಉತ್ತಮ ಸ್ಥಳ. ಈ ಜಾಗಕ್ಕೆ ಭೇಟಿ ಕೊಟ್ಟರೆ ಬದುಕಿನ ಜಂಜಾಟ ಮರೆತು ನಿರಾಳವಾಗುವುದರಲ್ಲಿ ಎರಡು ಮಾತಿಲ್ಲ.

ಹೌದು. ಸುತ್ತಲೂ ಹಸಿರಿನಿಂದ ಕೂಡಿರುವ ಸ್ಥಳ ಇದಾಗಿದ್ದು, ಇದರ ನಡುವೆ ನಡೆದು ಸಾಗುವ ಮಜಾನೇ ಬೇರೆ. ಮುತ್ತಿಕ್ಕಲು ಮಂಜಿನ ಹನಿ, ತಣ್ಣನೆ ಬೀಸುವ ಗಾಳಿಯ ನಡುವೆ ಟ್ರಕ್ಕಿಂಗ್ ಮಾಡುವ ಈ ಖುಷಿ ಎಲ್ಲಿಯೂ ಸಿಗದು. ಇಂತಹ ಅದ್ಭುತ ಹಸಿರ ಗಿರಿಯ ಸಾಲು ಕಂಡು ಬರೋದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ. ಮೂಡಿಗೆರೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಎತ್ತಿನ ಭುಜ ಬೆಟ್ಟದ ತುದಿಯು ಚಾರಣಿಗರ ಪ್ರಮುಖ ಆಕರ್ಷಣೆಯ ತಾಣಗಳಲ್ಲೊಂದು. ಇದು 4265 ಅಡಿ ಎತ್ತರವನ್ನು ಹೊಂದಿದೆ.

ಹಸಿರು ಬೆಟ್ಟಗಳ ನಡುವಿನ ದಟ್ಟವಾದ ಹುಲ್ಲುಗಾವಲಿನಲ್ಲಿ ಎತ್ತಿನ ಭುಜ ಬೆಟ್ಟವಿದೆ. ಜನಪ್ರಿಯ ಮತ್ತು ಸುಲಭವಾದ ಟ್ರೆಕ್ಕಿಂಗ್ ಸ್ಥಳ ಇದಾಗಿದೆ. ಏಕೆಂದರೆ ಕೊನೆಯ ಎರಡು ಕಿಲೋಮೀಟರ್‍ಗಳನ್ನು ಟ್ರೆಕ್ಕಿಂಗ್ ಮೂಲಕ ಶಿಖರದ ಸಮೀಪವಿರುವ ಬಿಂದುವನ್ನು ತಲುಪಬಹುದು. ಈ ಬೆಟ್ಟದ ಮೇಲೆ ನಿಂತಲ್ಲಿ ಸುತ್ತಮುತ್ತಲಿನ ಹಚ್ಚ ಹಸಿರಿನಿಂದ ಕೂಡಿರುವ ಸಾಲು-ಸಾಲು ಬೆಟ್ಟಗಳ ರಮಣೀಯ ದೃಶ್ಯ ಕಾಣಬಹುದಾಗಿದೆ. ಬೆಟ್ಟದ ತಪ್ಪಲಿನಿಂದ ಸುಮಾರು ನಾಲ್ಕು ಕಿ.ಮೀ. ದೂರ ಕ್ರಮಿಸಿದರೆ ನಾಣ್ಯ ಭೈರವೇಶ್ವರ ದೇವಾಲಯವಿದೆ. ಈ ದೇಗುಲದ ಬಳಿ ನಾಣ್ಯಗಳನ್ನು ಟಂಕಿಸುವ ಟಂಕಶಾಲೆಯೂ ಇತ್ತು. ಹಾಗಾಗಿ ಇದಕ್ಕೆ ಟಂಕ ಭೈರವೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಅಲ್ಲದೆ ಮೇಲೆ ಎಲ್ಲಿ ನೋಡಿದರೂ ಮಂಜು ಮತ್ತು ಬೀಸುವ ಗಾಳಿಯ ನಡುವೆ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ:  ಬ್ಯೂಟಿಫುಲ್ ಟ್ರೆಕ್ಕಿಂಗ್ ಸ್ಪಾಟ್ ಬಂಡಾಜೆ ಫಾಲ್ಸ್!

ಹೆಸರು ಬಂದಿದ್ದು ಹೇಗೆ..?: ನೋಡಲು ಎತ್ತಿನ ಭುಜದ ಅಕಾರದಲ್ಲಿ ಇರುವುದರಿಂದ ಈ ಬೆಟ್ಟವನ್ನು ಎತ್ತಿನ ಭುಜ ಅಂತಾ ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸದ್ಯ ಈ ಬೆಟ್ಟ ಟ್ರೆಕ್ಕಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 7 ಕಿಲೋ ಮೀಟರ್ ನಡೆಯುವ ಮೂಲಕ ವ್ಯೂವ್ ಪಾಯಿಂಟ್ ತಲುಪಲು ಸಾಧ್ಯವಾಗುತ್ತೆ. ಅದ್ರಲ್ಲೂ ಕೊನೆಯ 2 ಕಿಲೋ ಮೀಟರ್ ಅನ್ನೋದು ಮಾತ್ರ ಮೈ ಝುಮ್ ಅನ್ಸುತ್ತೆ. ಆದರೆ ಕಡಿದಾದ ಬೆಟ್ಟ ಹತ್ತಿದ ಮೇಲೆ ಅಲ್ಲಿರುವ ನಯನಮನೋಹರ ದೃಶ್ಯ ನೋಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ.

ಹೋಗುವುದು ಹೇಗೆ..?: ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಎತ್ತಿನ ಭುಜವಿದೆ. ಮೂಡಿಗೆರೆಯಿಂದ ಇಲ್ಲಿಗೆ ಇರುವ ದೂರ ಕೇವಲ 25 ಕಿಲೋ ಮೀಟರ್ ದೂರವಷ್ಟೇ. ಬೆಂಗಳೂರಿಂದ ಬರುವವರು ಬೆಂಗಳೂರು – ಮೂಡಿಗೆರೆ ಹೈವೇ ಮುಖಾಂತರವೇ ಬರಬಹುದಾಗಿದೆ. ಇದನ್ನೂ ಓದಿ: ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

ಬೆಂಗಳೂರಿನಿಂದ ಧರ್ಮಸ್ಥಳ ದೇವಸ್ಥಾನಕ್ಕೆ ನಿಮ್ಮನ್ನು ಕರೆದೊಯ್ಯುವ ಬಸ್ಸುಗಳಿವೆ. ಮತ್ತು ಇಲ್ಲಿಂದ ಶಿಶಿಲ ಅಥವಾ ಬೈರಾಪುರಕ್ಕೆ ಹೋಗಬೇಕು. ಶಿಶಿಲ ಧರ್ಮಸ್ಥಳದಿಂದ 32 ಕಿಮೀ ದೂರದಲ್ಲಿದೆ. ಕೊಕ್ಕಡ ಗ್ರಾಮದಲ್ಲಿ ನಿಮ್ಮನ್ನು ಇಳಿಸುವ ಸ್ಥಳೀಯ ಬಸ್ ಹಿಡಿಯಬಹುದು ಮತ್ತು ಅಲ್ಲಿಂದ ಶಿಶಿಲವನ್ನು ತಲುಪಲು ಜೀಪ್ ಸವಾರಿ ಮಾಡಬಹುದು. ಮೂಡಿಗೆರೆ ಧರ್ಮಸ್ಥಳದಿಂದ 55 ಕಿಮೀ ದೂರದಲ್ಲಿದೆ. ಮೂಡಿಗೆರೆಯಲ್ಲಿ ಸ್ಥಳೀಯ ಬಸ್ ಹಿಡಿಯಬಹುದು ಮತ್ತು ಅಲ್ಲಿಂದ ಜೀಪ್ ಸವಾರಿ ಅಥವಾ ಇನ್ನೊಂದು ಬಸ್ಸಿನಲ್ಲಿ ಬೈರಾಪುರವನ್ನು ತಲುಪಬಹುದು.

ಶಿಶಿಲಾ ಗ್ರಾಮದಿಂದ ಹೋಗುವುದಾದರೆ 13 ಕಿಮೀ ಚಾರಣ ಮಾಡಬೇಕಾಗುತ್ತದೆ. ಈ ಚಾರಣ ಪೂರ್ಣಗೊಳ್ಳಲು ಸುಮಾರು 6 ಗಂಟೆಗಳೇ ಬೇಕಾಗುತ್ತದೆ. ಪ್ರಾಚೀನ ದುರ್ಗಾ ದೇವಸ್ಥಾನದ ಬಳಿಯಿಂದ ಚಾರಣ ಪ್ರಾರಂಭವಾಗುತ್ತೆ. ನೀವು ದಟ್ಟವಾದ ಕಾಡಿನೊಳಗಿನ ಈ ಟ್ರೆಕ್ಕಿಂಗ್ ಹಾದಿಯು ತೊರೆಗಳು, ಎತ್ತರದ ಹುಲ್ಲುಗಾವಲು ಮತ್ತು ಕಡಿದಾದ ಕಣಿವೆಯ ಮೂಲಕ ಮೇಲಕ್ಕೆ ತಲುಪುತ್ತದೆ. ಇನ್ನು ಬೈರಾಪುರ ಗ್ರಾಮದಿಂದ ಹೋಗುವುದಾದರೆ ಕೇವಲ 5 ಕಿಮೀ ಚಾರಣ ಮಾಡದಿರೆ ಶಿಖರ ತಲುಪಬಹುದು. ಶಿಖರವನ್ನು ತಲುಪಲು ಸುಮಾರು 2 ಗಂಟೆಗಳು ತೆಗೆದುಕೊಳ್ಳುತ್ತದೆ. ಚಾಣ ಮಾಡುವಾಗ ಅತೀ ಹೆಚ್ಚು ಸುಸ್ತು ಆಗುವವರಿಗೆ ಈ ದಾರಿಯೇ ಒಳ್ಳೆಯದು.

ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಅದ್ಭುತವಾಗಿ ಕಣ್ತುಂಬಿಕೊಳ್ಳಬಹುದು. ಆದ್ದರಿಂದ ನೀವು ಸಂಜೆಯ ವೇಳೆಗೆ ಶಿಖರವನ್ನು ತಲುಪುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಮಂಜು ತುಂಬಿದ ಸೂರ್ಯೋದಯವನ್ನು ವೀಕ್ಷಿಸಲು ಇಲ್ಲಿ ಕ್ಯಾಂಪ್ ಮಾಡಿ. ಅಲ್ಲದೆ ಹಚ್ಚ ಹಸಿರಿನ ಕಣಿವೆ, ಸಣ್ಣ ತೊರೆಗಳು, ಘಾಟ್‍ಗಳು ಮತ್ತು ಮೋಡಗಳ ಸಂಪೂರ್ಣ ನೋಟವನ್ನು ನೀವು ತಪ್ಪಿಸಿಕೊಳ್ಳಬಾರದು.

ರಾತ್ರಿಯಿಡೀ ಬೆಟ್ಟದ ಮೇಲೆ ಕ್ಯಾಂಪ್ ಮಾಡಬಹುದು ಮತ್ತು ಹೋಮ್‍ಸ್ಟೇಗಳು ನಿಮಗೆ ಸಹಾಯ ಮಾಡುತ್ತವೆ. ಶಿಖರದ ಕೆಳಗೆ ಕೇವಲ 50 ಮೀ ಕೆಳಗೆ ಸಮತಟ್ಟಾದ ಭೂಮಿ ಇದೆ, ಅಲ್ಲಿ ಟೆಂಟ್ ಹಾಕಬಹುದು. ಇದರ ಸಮೀಪವೇ ಸಣ್ಣ ಹೊಳೆ ಹಾದು ಹೋಗಿರುವುದರಿಂದ ನೀರಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅಡುಗೆ ಮಾಡಲು ಇಷ್ಟಪಡುತ್ತಿದ್ದರೆ ಅದಕ್ಕೆ ಬೇಕಾದ ವಸ್ತುಗಳನ್ನು ಒಯ್ಯಬಹುದು.

ಒಟ್ಟಿನಲ್ಲಿ ಈ ಬೆಟ್ಟಕ್ಕೆ ಬರುವಾಗ ಮಾರ್ಗದರ್ಶಕರ ಜೊತೆ ಬರುವುದು ಒಳ್ಳೆಯದು. ಯಾಕೆಂದರೆ ಕಾಡು ದಾರಿ ಇರುವುದರಿಂದ ದಾರಿ ತಪ್ಪಿದರೆ ಕಷ್ಟ. ಅಲ್ಲದೆ ಆಸುಪಾಸಿನಲ್ಲಿ ಕಾಡುಪ್ರಾಣಿಗಳು, ಆನೆಗಳು ಇರುತ್ತವೆ. ಹೀಗಾಗಿ ಜಾಗರೂಕರಾಗಿ ಚಾರಣ ಮಾಡಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್