ಅಯ್ಯನಕೆರೆಯಲ್ಲಿ ಸಂಭ್ರಮ- ಮಳೆ ಅಬ್ಬರಕ್ಕೆ ಪ್ರವಾಸಿ ತಾಣವಾದ ಸಖರಾಯಪಟ್ಟಣ

Public TV
2 Min Read

ಚಿಕ್ಕಮಗಳೂರು: ಮಲೆನಾಡಿನ ಜಲಪ್ರಳಯಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾದ್ರೆ, ಬಯಲುಸೀಮೆ ಜನರಿಗೆ ಬದುಕುವ ಚೈತನ್ಯ ತಂದಿದೆ. ಅಲ್ಲಿ ಅಲ್ಲೋಲ-ಕಲ್ಲೋಲ, ಇಲ್ಲಿ ಹರ್ಷೋದ್ಘಾರ ಎನ್ನುವಂತೆ ಒಂದೆಡೆ ನೀರಿಂದಲೇ ಬದುಕು ಬೀದಿಗೆ ಬಂದಿದ್ದರೆ, ಇನ್ನೊಂದೆಡೆ ಅದೇ ನೀರು ಬದುಕುವ ಆಸೆ ತಂದಿದೆ.

ಹೌದು. ಮೂರು ಹವಾಗುಣ ಹೊಂದಿರೋ ಕಾಫಿನಾಡಲ್ಲಿ ಒಂದೊಂದು ಭಾಗದ್ದು ಒಂದೊಂದು ಗೋಳು. ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯ ಕಡೂರು ತಾಲೂಕಿನ ಜನಕ್ಕೀಗ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ. 100 ಎಕ್ರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಅಯ್ಯನಕೆರೆ ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿಯಾಗಿದ್ದು, ಮಲೆನಾಡಿನ ಮಳೆ ಅಬ್ಬರಕ್ಕೆ ಕಳೆದೊಂದು ವಾರದಿಂದ ಅಯ್ಯನಕೆರೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ.

ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಕೆರೆಯ ಸಾಕ್ಷಿಯಂತಾಗಿದೆ. ಹಸಿರ ನೀರಿನ ಸೌಂದರ್ಯವನ್ನ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು. ಇಲ್ಲಿ ಬೋಟಿಂಗ್ ವ್ಯವಸ್ಥೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕೆರೆ ತುಂಬಿರೋದು ಒಂದೆಡೆ ಪ್ರವಾಸಿಗರಿಗೆ ಮನೋರಂಜನೆ ನೀಡುತ್ತಿದ್ದರೆ. ಇನ್ನೊಂದೆಡೆ ನೀರಿನ ಅಭಾವದಿಂದ ಪರದಾಡುತ್ತಿದ್ದ ಹಳ್ಳಿಗರು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು ಇಲ್ಲಿಗೂ ಬಂದು ಇಲ್ಲಿನ ಸೌಂದರ್ಯವನ್ನ ಸವಿಯುತ್ತಾರೆ. ಅದರಲ್ಲೂ ಇಲ್ಲಿ ಯುವಕ-ಯುವತಿಯರು, ಪ್ರೇಮಿಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ವೀಕೆಂಡ್‍ನಲ್ಲಿ ಇಲ್ಲಿಗೆ ಆಗಮಿಸೋ ಪ್ರವಾಸಿಗರು ದಿನವಿಡೀ ಕೆರೆ ಬಳಿ ಕುಣಿದು ಕುಪ್ಪಳಿಸ್ತಾರೆ. ಮತ್ತೊಂದೆಡೆ ಸಾಹಸಿ ಈಜುಪಟುಗಳು ಮನಸ್ಸಿಗೆ ತೋಚಿದಂತೆಲ್ಲಾ ನೀರಿಗೆ ಬಿದ್ದು, ಈಜಿ ತಮ್ಮ ಆಸೆ ಪೂರೈಸಿಕೊಳ್ತಿದ್ದಾರೆ. ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ಹೀಗೆ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ. ಅಲ್ಲದೆ ಈಗ ಸರ್ಕಾರ ಈ ಕೆರೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿರುವುದು ವ್ಯವಹಾರದ ದೃಷ್ಠಿಯಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಮತ್ತಷ್ಟು ಖುಷಿ ತಂದಿದೆ.

ಮಲೆನಾಡಿನ ಮಳೆ ಒಂದೆಡೆ ಖುಷಿ ತಂದರೆ. ಮತ್ತೊಂದೆಡೆ ನೋವು ತರಿಸಿದೆ. ಮಲೆನಾಡಿಗರು ನಮಗೆ ಮಳೆಯೇ ಬೇಡ ಅಂತಿದ್ದರೆ, ಕಡೂರು ತಾಲೂಕಿನ ಮಂದಿ ಮಾತ್ರ ಇಂದಿಗೂ ಬಾರಪ್ಪ ಮಳೆರಾಯ ಅನ್ನೊದನ್ನ ಬಿಟ್ಟಿಲ್ಲ. ಪ್ರವಾಸಿ ತಾಣವಾಗಿ ಈ ನಯನ ಮನೋಹರ ಜಾಗವಾದ ಅಯ್ಯನಕೆರೆ ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕೆರೆಯ ಸೌಂದರ್ಯ ರಾಶಿ ಕೂಡ ಕಣ್ಣಲ್ಲಿ ಕಟ್ಟುವಂತಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯಾದರೆ ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *