ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

Public TV
3 Min Read

ಬೆಂಗಳೂರು: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ.

ಆನ್‍ಲೈನ್‍ನಲ್ಲಿ ಫುಡ್ ಡೆಲಿವರಿ ಮಾಡುವ ಧಾವಂತದಲ್ಲಿ ಸ್ವಚ್ಛತೆಯನ್ನೇ ಹೋಟೆಲ್‍ಗಳು ಮರೆಯುತ್ತಿವೆ. ಜೊಮಾಟೋ, ಸ್ವಿಗ್ಗಿ ಸೇರಿದಂತೆ ಆನ್‍ಲೈನ್ ಆ್ಯಪ್‍ಗಳ ಮೂಲಕ ಫುಡ್ ಡೆಲಿವರಿ ಮಾಡುವ ಡರ್ಟಿ ಕಿಚನ್‍ಗಳ ಅಸಲಿ ಬಣ್ಣವನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿದೆ. ಮುಖ್ಯವಾಗಿ ನಗರದ ಹಲವೆಡೆ ಹೊರ ರಾಜ್ಯದಿಂದ ಬಂದವರೇ ಈ ಬ್ಯುಸಿನೆಸ್ ನಡೆಸುತ್ತಿದ್ದಾರೆ.

ವಸಂತನಗರ, ಫ್ಯಾಸೂಸ್‍ನ, ತಡ್ಕವಾಲಾ ಕಿಚನ್:
ವಸಂತನಗರದಲ್ಲಿರುವ ಪ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿಯ ತಡ್ಕವಾಲಾ ಕಿಚನ್‍ನಲ್ಲಿ ಸ್ವಚ್ಛತೆ ಅನ್ನೋದೆ ಇಲ್ಲ. ಫ್ರಿಜ್‍ನಲ್ಲಿ ಹೆಪ್ಪುಗಟ್ಟಿರುವ ಮಟನ್, ಚಿಕನ್ ಪೀಸ್‍ಗಳು, ಟಾಯ್ಲೆಟ್ ರೂಮಿನಲ್ಲಿ ಕಬಾಬ್ ಹಾಗೂ ರೈಸ್ ಬೇಯಿಸುವ ಕಡಾಯಿಗಳು ಹಾಗೂ ಕೊಳೆತ ಸ್ಥಿತಿಯಲ್ಲಿರುವ ಸೊಪ್ಪು ಪದಾರ್ಥಗಳು ಕಂಡು ಬಂದಿವೆ. ಫ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿ ಮೂಲಕ ನಗರದ ಮಾರತಹಳ್ಳಿ, ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ರಾಜಾಜಿನಗರ, ಬೊಮ್ಮನಹಳ್ಳಿ, ಕೆಂಗೇರಿ ಸೇರಿ 20 ರಿಂದ 25 ಹೋಟೆಲ್‍ಗಳನ್ನ ನಡೆಸುತ್ತಿದ್ದಾರೆ.

ಕಂಪನಿಯ ಹೆಸರಿನ ಮೇಲೆ ಅನುಮತಿ ಪಡೆದು ಅಕ್ರಮವಾಗಿ ಕಿಚನ್‍ಗಳ ಮೂಲಕ ಲಂಚ್ ಬಾಕ್ಸ್, ಬಿರಿಯಾನಿ ಹೌಸ್ ಹೀಗೆ ನಾನಾ ಹೆಸರಿನ ಮೇಲೆ ಆನ್ ಲೈನ್ ಫುಡ್ ಡೆಲಿವರಿ ಮಾಡಲಾಗುತ್ತದೆ. ಇದು ಕಳೆದ ನಾಲ್ಕು ವರ್ಷಗಳಿಂದ ಈ ಗಲೀಜು ವ್ಯವಹಾರ ನಡೆಯುತ್ತಿದೆ. ಪುಣೆ ಮೂಲದ ಕಲೋಲ್ ಸಚಿ ಬ್ಯಾನರ್ಜಿ ಇಷ್ಟೆಲ್ಲಾ ಅಕ್ರಮ ವ್ಯವಹಾರ ಮಾಡುತ್ತಿದ್ದಾರೆ. ಕೋಲ್ಕತ್ತಾ, ಪುಣೆ ಹುಡುಗರನ್ನು ಇಲ್ಲಿಗೆ ಕರೆಸಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ.

ಫ್ಯಾಸೂಸ್ ಹೋಟೆಲ್ ಮೂಲಕ ಪ್ರತಿನಿತ್ಯ ಸಾವಿರಾರು ಜನರ ಹೊಟ್ಟೆಗೆ ಕಲುಷಿತ ಆಹಾರ ಸೇರುತ್ತಿದೆ. ಒಂದೇ ಪರವಾನಿಗೆ ಪತ್ರದಿಂದ 20 ರಿಂದ 25 ಹೋಟೆಲ್‍ಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದು ಕ್ಲೌಡ್ ಕಿಚನ್‍ನಿಂದ ಪ್ರತಿನಿತ್ಯ 250ಕ್ಕೂ ಹೆಚ್ಚು ಫುಡ್ ಡೆಲಿವರಿಯಾಗುತ್ತದೆ. ಪ್ರತಿದಿನ 25 ಹೋಟೆಲ್‍ಗಳಿಂದ, 250 ರಂತೆ ಒಟ್ಟು 6,250 ಜನರಿಗೆ ಫುಡ್ ಡೆಲಿವರಿಯಾಗುತ್ತದೆ. ಪ್ರತಿನಿತ್ಯ ಲಕ್ಷ ಲಕ್ಷ ಹಣ ಸಂಪಾದಿಸುವ ಪ್ಯಾಸೂಸ್ ಫುಡ್ ಸರ್ವಿಸಸ್ ಸ್ವಚ್ಛತೆ ಬಗ್ಗೆ ಗಮನವೇ ಹರಿಸಿಲ್ಲ.

ಬನ್ನೇರುಗಟ್ಟ ರಸ್ತೆಯ ಬಿಳೆಕಹಳ್ಳಿ, ಶುದ್ಧ್ ದೇಸಿ ಖಾನ ಕಿಚನ್:
ಬನ್ನೇರುಗಟ್ಟದ ಬಿಳೆಕಹಳ್ಳಿಯ ಶುದ್ಧ್ ದೇಸಿ ಖಾನ ಕಿಚನ್ ಅನ್ಸೂಮನ್ ಬೋವಲ್ ಹಾಗೂ ನಿಖಿಲ್ ರಾಜು ಎಂಬವರ ಮಾಲೀಕತ್ವದಲ್ಲಿದೆ. ಕಿಚನ್ ಡಸ್ಟ್ ಬೀನ್‍ನಲ್ಲಿ ಎರಡು ದಿನದ ಹಿಂದಿನ ರೈಸ್ ಹಾಗೂ ತಂದೂರಿ ರೊಟ್ಟಿ ಇಟ್ಟಿದ್ದರು. ಇದನ್ನು ರೆಕಾರ್ಡ್ ಮಾಡುತ್ತಿದ್ದ ನಮ್ಮ ತಂಡದ ಮೇಲೆಯೇ ಅಲ್ಲಿನ ಸಿಬ್ಬಂದಿ ಅವಾಜ್ ಹಾಕಿದರು. ವಿಡಿಯೋ ಚಿತ್ರಿಕರಣ ಮಾಡದಂತೆ ತಡೆದರು. ಅಷ್ಟೇ ಅಲ್ಲದೆ ಅವರ ಮಾಲೀಕನಿಗೆ ಕಾಲ್ ಮಾಡಿ ನಮ್ಮ ಕೈಗೆ ಮೊಬೈಲ್ ಕೊಟ್ಟರು. ಮಾಲೀಕ ನಾನು ಬರುವ ತನಕ ಅಲ್ಲಿಂದ ಹೋಗಬೇಡಿ ಎಂದು ತಾಕೀತು ಮಾಡಿದರು.

ಇಂತಹ ಭಯಂಕರ ಪರಸ್ಥಿತಿಯಲ್ಲಿಯೂ ಡರ್ಟಿ ಸ್ಪಾಟ್‍ನ್ನ ಪಬ್ಲಿಕ್ ಟಿವಿ ತಂಡ ಬಯಲಿಗೆಳೆದಿದೆ. ನಾವು ಕಿಚನ್‍ಗೆ ಹೋಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಕಿಚನ್ ಕ್ಲೀನ್ ಮಾಡೋಕೆ ಮುಂದಾಗಿದ್ದರು. ಇನ್ನು ಈ ಬಗ್ಗೆ ಇಲ್ಲಿನ ಇನ್ ಚಾರ್ಜ್ ಕೇಳಿದರೆ, ಆರ್ಡರ್ ಜಾಸ್ತಿ ಇದ್ದಾಗ ಹೀಗೆ ಆಗುತ್ತೆ ಸಾರ್ ಎಂದು ಸಮಜಾಯಿಷಿ ನೀಡಿದ್ದಾರೆ.

ಬನ್ನೇರುಗಟ್ಟ ಮುಖ್ಯರಸ್ತೆ, ಲೇಟ್ ನೈಟ್ ಕಿಚನ್:
ಲೇಟ್ ನೈಟ್ ಕಿಚನ್ ನಿಂದ ಬೆಂಗಳೂರಿನಲ್ಲಿ ಅರ್ಧ ರಾತ್ರಿಯಲ್ಲಿಯೂ ಫುಡ್ ಡೆಲಿವರಿ ಆಗುತ್ತದೆ. ಅಲ್ಲಿಯೂ ಕೂಡ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲಿ ಅಡುಗೆ ಮಾಡುವ ಸಿಬ್ಬಂದಿಯೊಬ್ಬ ಚಪ್ಪಲ್ ಹಾಕಿಕೊಂಡೆ ಪಾತ್ರೆಗಳನ್ನು ತೊಳೆಯುತ್ತಿದ್ದ. ಅಡುಗೆ ಮನೆಯ ಕೋಣೆಯ ನೆಲ ಕೂಡ ಗಬ್ಬು ವಾಸನೆಯಿಂದ ಕೂಡಿತ್ತು. ಮೊದಲೆರಡು ಕಿಚನ್‍ಗಳಿಗೆ ಹೊಲಿಸಿಕೊಂಡರೆ ಕೊಂಚ ಮಟ್ಟಿಗೆ ಇಲ್ಲಿ ಸ್ವಚ್ಛತೆ ಇತ್ತು.

ಒಟ್ಟಿನಲ್ಲಿ ಆನ್‍ಲೈನ್ ಫುಡ್ ಡೆಲಿವರಿಯ ಹೆಸರಲ್ಲಿ ಹೋಟೆಲ್ ಮಾಲೀಕರು ಸ್ವಚ್ಛತೆಯನ್ನೇ ಮರೆತಿದ್ದಾರೆ. ನೇಪಾಳಿ, ಬೆಂಗಾಳಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಡರ್ಟಿ ಕಿಚನ್‍ಗಳಿಂದ ಫುಡ್ ಡಿಸ್ಟ್ರೂಬ್ಯೂಟ್ ಮಾಡುತ್ತಿದ್ದಾರೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದೆಗೆ ಕ್ಯಾರೇ ಅಂತಿಲ್ಲ. ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‍ಗಳಿಗೆ ಬಿಬಿಎಂಪಿಯ ಆಹಾರ ಇಲಾಖೆ ಅಧಿಕಾರಿಗಳು ಹೇಗೆ ಲೈಸನ್ಸ್ ನ್ನು ರಿನಿವಲ್ ಮಾಡಿಕೊಟ್ಟರು ಅನ್ನೋ ಪ್ರಶ್ನೆ ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *