ಐಪಿಎಲ್‌ನಲ್ಲಿ ಪವರ್ ಪ್ಲೇಯರ್ – ಕೊನೆಯ ಓವರಿನಲ್ಲಿ ಪಂದ್ಯದ ಫಲಿತಾಂಶವೇ ಬದಲಾಗುತ್ತೆ

Public TV
2 Min Read

ಮುಂಬೈ: ವಿಶ್ವ ಕ್ರಿಕೆಟಿನಲ್ಲಿ ಹಣದ ಹೊಳೆ ಹರಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮತ್ತಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಬಿಸಿಸಿಐ ‘ಪವರ್ ಪ್ಲೇಯರ್’ ಎನ್ನುವ ಹೊಸ ಪರಿಕಲ್ಪನೆ ಜಾರಿ ಮಾಡಲು ಮುಂದಾಗುತ್ತಿದೆ.

ಇಂದು ಮುಂಬೈನಲ್ಲಿ ಬಿಸಿಸಿಐ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಗೆ ನೀಡಿದರೆ ಮುಂದಿನ ವರ್ಷವೇ ಈ ಪವರ್ ಪ್ಲೇಯರ್ ಕಲ್ಪನೆ ಜಾರಿಯಾಗುವ ಸಾಧ್ಯತೆಯಿದೆ. ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ದೇಶದಲ್ಲಿ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ನೀಡಿರುವ ಗಂಗೂಲಿ ಈ ಪ್ರಸ್ತಾಪಕ್ಕೂ ಒಪ್ಪಿಗೆ ನೀಡಬಹುದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಈಗ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ಆಡುವ ಹನ್ನೊಂದು ಮಂದಿಯ ಬಳಗವನ್ನು ಹೆಸರಿಸುತ್ತದೆ. ಆದರೆ ಈ ಪವರ್ ಪ್ಲೇಯರ್ ನಲ್ಲಿ 11 ರ ಬದಲಾಗಿ 15 ಮಂದಿ ಆಟಗಾರರ ಹೆಸರನ್ನು ಹೆಸರಿಸಬೇಕಾಗುತ್ತದೆ. ಈ ಕಲ್ಪನೆ ಕಾರ್ಯಗತವಾದರೆ ತಂಡಗಳಿಗೆ ಪಂದ್ಯದ ಯಾವುದೇ ಹಂತದಲ್ಲಿ ವಿಕೆಟ್ ಪತನಗೊಂಡಾಗ ಇಲ್ಲವೇ ಓವರ್ ಮುಕ್ತಾಯಗೊಂಡಾಗ ಬದಲಿ ಆಟಗಾರನ್ನು ಕಣಕ್ಕೆ ಇಳಿಸಬಹುದಾಗಿದೆ.

ಪಂದ್ಯದ ದಿಕ್ಕೇ ಬದಲಾಗುತ್ತೆ:
ಪವರ್ ಪ್ಲೇಯರ್ ಜಾರಿಯಾದರೆ ಪಂದ್ಯದ ಫಲಿತಾಂಶವೇ ಬದಲಾಗಬಹುದು. ಉದಾಹರಣೆಗೆ ಒಂದು ತಂಡ 9 ವಿಕೆಟ್ ಕಳೆದುಕೊಂಡಿರುತ್ತದೆ. ಈ ತಂಡ ಜಯಗಳಿಸಲು ಕೊನೆಯ ಓವರ್ ನಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿರುತ್ತದೆ. ಈ ವೇಳೆ ಆಡುವ 11ರಲ್ಲಿ ಸ್ಥಾನ ಪಡೆಯದ ಬ್ಯಾಟ್ಸ್ ಮನ್ ಕ್ರೀಸಿಗೆ ಆಗಮಿಸಿ ಸಿಕ್ಸರ್, ಬೌಂಡರಿ ಹೊಡೆದು ಪಂದ್ಯವನ್ನೇ ಬದಲಾಯಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಕೊನೆಯ ಓವರ್‌ನಲ್ಲಿ 8 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ 11ರ ಬಳಗದಲ್ಲಿ ಸ್ಥಾನ ಪಡೆಯದ ಬೌಲರಿಗೆ ಒವರ್ ಎಸೆಯಲು  ಅವಕಾಶ ಸಿಗುತ್ತದೆ.

ಫ್ರಾಂಚೈಸಿಗಳು ಒಪ್ಪುತ್ತಾ?
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ಭಾರೀ ಹೂಡಿಕೆ ಮಾಡಿವೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಪಂದ್ಯ ಕೈ ಜಾರಲಿರುವ ಕಾರಣ ಇವುಗಳ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದೇ ಈಗ ಕುತೂಹಲಕ್ಕೆ ಕಾರಣವಾಗಿದೆ.

ಅಭಿಮಾನಿಗಳಿಗೆ ಮನರಂಜನೆ:
ಐಪಿಎಲ್ ಅಭಿಮಾನಿಗಳ ಕೊರತೆ ಇಲ್ಲ. ಸುಲಭವಾಗಿ ಪಂದ್ಯವನ್ನು ಗೆದ್ದರೆ ಅದರಲ್ಲಿ ಯಾವುದೇ ಮನರಂಜನೆ ಇರುವುದಿಲ್ಲ. ಪವರ್ ಪ್ಲೇಯರ್ ಕಲ್ಪನೆ ಬಂದರೆ ಕೊನೆ ಕ್ಷಣದವರೆಗೂ ರೋಚಕತೆ ಇರುತ್ತದೆ. ಅಷ್ಟೇ ಅಲ್ಲದೇ ನಾಯಕ ಮತ್ತು ಕೋಚ್ ನಿರ್ಧಾರ ಸಹ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *