IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

Public TV
2 Min Read

ಮುಂಬೈ: 2024ರ ಐಪಿಎಲ್‌ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕೋಲ್ಕತ್ತಾ ನೈಟ್‌ ರೈಡರ್ಸ್‌ 3ನೇ ಬಾರಿಗೆ ಪಟ್ಟಕ್ಕೇರಿದೆ. ಈ ನಡುವೆ ಮಾನವೀಯತೆ ಮೆರೆದಿರುವ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಟೂರ್ನಿಯ ಯಶಸ್ಸಿಗೆ ಕಾರಣಾದ ಪ್ರಮುಖ 10 ಐಪಿಎಲ್‌ ಕ್ರೀಡಾಂಗಣಗಳ ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ (Curators And Groundstaff) ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಪ್ರಶಸ್ತಿಯನ್ನು ಗೆದ್ದಿದ್ದು ಕೆಕೆಆರ್‌ (KKR) ಫ್ರಾಂಚೈಸಿಯೇ ಆದರೂ ಹೃದಯ ಗೆದ್ದದ್ದು ಮಾತ್ರ ಪಿಚ್‌ ಕ್ಯುರೇಟರ್‌ ಹಾಗೂ ಕ್ರೀಡಾಂಗಣದ ಸಿಬ್ಬಂದಿ. ಇವರು ʻಅಸಾಧಾರಣ ಹೀರೋʼಗಳೆಂದು ಕೋಟ್ಯಂತರ ಅಭಿಮಾನಿಗಳಿಂದಲೂ ಮೆಚ್ಚುಗೆ ಪಡೆದಿದ್ದಾರೆ. ಇದನ್ನೂ ಓದಿ: Photos Gallery: ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ರಮಿಸಿದ ಕ್ಷಣ ಹೀಗಿತ್ತು…

ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್‌ ಶಾ, ಅನಿರೀಕ್ಷಿತ ಮಳೆ, ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಮೈದಾನ ಮತ್ತು ಪಿಚ್‌ ಅನ್ನು ನೆನೆಯದಂತೆ ನೋಡಿಕೊಂಡು, ಮೈದಾನಕ್ಕೆ ನೀರು ಬಂದರೂ ಅದನ್ನು ಹರಸಾಹಸದಿಂದ ಒಣಗಿಸಿ, ಆಟಕ್ಕೆ ಅಣಿಗೊಳಿಸಿದ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾಗಿದ್ದಾರೆ. ಹಾಗಾಗಿ ನಮ್ಮ ಶ್ಲಾಘನೆಯ ಸಂಕೇತವಾಗಿ ಐಪಿಎಲ್‌ ಟೂರ್ನಿ ನಡೆದ ಪ್ರಮುಖ ಸ್ಥಳಗಳ ಕ್ರೀಡಾಂಗಣ ಸಿಬ್ಬಂದಿ ಹಾಗೂ ಪಿಚ್‌ ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂ. ನೀಡಲು ಮುಂದಾಗಿದ್ದೇವೆ. ಕೇವಲ ಒಂದೆರಡು ಪಂದ್ಯಗಳನ್ನು ಆಯೋಜಿಸಿದ್ದ ಸ್ಥಳಗಳಿಗೆ 10 ಲಕ್ಷ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ನಿಮ್ಮ ಸಮರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಶ್ರೀಲಂಕಾ ಮತ್ತು ಪಾಕ್‌ ಜಂಟಿ ಆತಿಥ್ಯದಲ್ಲಿ ನಡೆದ ಏಕದಿನ ಏಷ್ಯಾಕಪ್‌ ಟೂರ್ನಿ ವೇಳೆ ಜಯ್‌ ಶಾ ಅವರು, ಕೊಲಂಬೊ ಕ್ರೀಡಾ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಇದನ್ನೂ ಓದಿ:IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಮೂರು ಪಂದ್ಯ ಮಳೆಗೆ ಬಲಿ:
ಲೀಗ್‌ ಸುತ್ತಿನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ 2 ಪಂದ್ಯ ಹಾಗೂ ಕೋಲ್ಕತ್ತಾ-ರಾಜಸ್ಥಾನ್‌ ರಾಯಲ್ಸ್‌ ನಡುವಿನ ಒಂದು ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದಕ್ಕೂ ಮುನ್ನ ಮುಂಬೈ – ಕೆಕೆಆರ್‌ ನಡುವಿನ ಲೀಗ್‌ ಪಂದ್ಯ ಮಳೆಯಿಂದಾಗಿ ಕೆಲಕಾಲ ಅಡ್ಡಿಯಾದರೂ ಬಳಿಕ ಓವರ್‌ ಕಡಿತಗೊಳಿಸಿ ತಲಾ 16 ಓವರ್‌ಗಳಿಗೆ ಪಂದ್ಯ ನಡೆಸಲಾಗಿತ್ತು. ಸಿಎಸ್‌ಕೆ-ಆರ್‌ಸಿಬಿ ನಡುವಿನ ನಾಕೌಟ್‌ ಕದನದಲ್ಲಿ ಮಳೆ ಹೊರತಾಗಿಯೂ ಪೂರ್ಣ ಪಂದ್ಯ ನಡೆಯುವುದಕ್ಕೆ ಕ್ರೀಡಾ ಸಿಬ್ಬಂದಿ ಹಾಗೂ ಪಿಚ್‌ ಕ್ಯುರೇಟರ್‌ಗಳು ಹರಸಾಹಸಪಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.

Share This Article