ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

Public TV
2 Min Read

– ಶುಭಮನ್‌ ಗಿಲ್‌ಗೆ ನಾಯಕತ್ವ ನೀಡುವ ಸಾಧ್ಯತೆ

ಮುಂಬೈ: 2025ರ ಟಿ20 ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆಯಾದ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನ ಟೀಂ ಇಂಡಿಯಾದ ಒನ್‌ಡೇ ಕ್ಯಾಪ್ಟನ್‌ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ (BCCI) ತೆರೆ ಎಳೆದಿದೆ.

ಹೌದು. ಏಷ್ಯಾಕಪ್‌ ಟೂರ್ನಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡದ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕ್ರಿಕೆಟ್‌ ತಜ್ಞರು ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದ್ರೆ ಒಂದು ದಿನದ ಹಿಂದಷ್ಟೇ ಅಯ್ಯರ್ ಅವರ ಬಗ್ಗೆ ಪ್ರತ್ಯೇಕ ಲೆಕ್ಕಾಚಾರ ಹಾಕಿದ್ದು, ಮಹತ್ತರ ಜವಾಬ್ದಾರಿ ನೀಡಲು ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

ಬಿಸಿಸಿಐ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್ ಶರ್ಮಾ (Rohit Sharma) ಅವರು 2027ರ ವಿಶ್ವಕಪ್ ವರೆಗೆ ಲಭಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಏಷ್ಯಾಕಪ್‌ ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಲಿದ್ದು, ಅಯ್ಯರ್ ಅವರೇ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.

ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ: Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

ಇನ್ನೂ ಶ್ರೇಯಸ್‌ ಅಯ್ಯರ್‌ ಅವರನ್ನು ಟೂರ್ನಿಯಿಂದ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿ, ಇದರಲ್ಲಿ ಶ್ರೇಯಸ್‌ ತಪ್ಪು ಏನೂ ಇಲ್ಲ, ನಮ್ಮದೂ ತಪ್ಪಿಲ್ಲ. ಟೂರ್ನಿಗೆ 15 ಜನರನ್ನಷ್ಟೇ ಆಯ್ಕೆ ಮಾಡಲು ಅವಕಾಶವಿದೆ. ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ನಡುವೆ ಟೆಸ್ಟ್‌ ತಂಡದ ಯುವ ನಾಯಕ ಶುಭಮನ್‌ ಗಿಲ್‌ ಅವರಿಗೇ ಏಕದಿನ ಕ್ಯಾಪ್ಟೆನ್ಸಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆಸೀಸ್‌ ಸರಣಿ ಬಳಿಕ ರೋಹಿತ್- ಕೊಹ್ಲಿಗೆ ವಿದಾಯ?
ಇನ್ನೂ ಮುಂದಿನ ಅಕ್ಟೋಬರ್‌ 19ರಿಂದ ಅ.25ರ ವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್‌, ರೋಹಿತ್‌ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ವಿದಾಯ ಹೇಳಿರುವ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇದನ್ನೂ ಓದಿ: 1,650 ಕೋಟಿ ವೆಚ್ಚ, 60,000 ಆಸನ ಸಾಮರ್ಥ್ಯ – ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಚಿನ್ನಸ್ವಾಮಿಗಿಂತಲೂ ಬೃಹತ್‌ ಸ್ಟೇಡಿಯಂ

ಶ್ರೇಯಸ್ ನಾಯಕತ್ವದ ಅನುಭವ
ಟೀಂ ಇಂಡಿಯಾ ಪರವಾಗಿ 70 ಏಕದಿನ ಪಂದ್ಯಗಳನ್ನು ಆಡಿರುವ ಶ್ರೇಯಸ್ ಅಯ್ಯರ್ ಅವರು ಒಟ್ಟು 2,845 ರನ್ ಗಳಿಸಿದ್ದಾರೆ. ಅದರಲ್ಲಿ 5 ಶತಕಗಳು ಸೇರಿವೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. 2024ರಲ್ಲಿ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ IPL ಪ್ರಶಸ್ತಿ ಗೆದ್ದುಕೊಂಡಿತು. ನಂತರ ಪಂಜಾಬ್ ಕಿಂಗ್ಸ್ ಯುವ ಪಡೆಯನ್ನ ಮುನ್ನಡೆಸಿದ ಶ್ರೇಯಸ್‌ ಅಯ್ಯರ್‌ ಫೈನಲ್‌ಗೇರಿಸಿದ್ದರು.

Share This Article