ಬಿಜೆಪಿ ಸರ್ಕಾರದ ಮುತುವರ್ಜಿ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಾಗಿದೆ: ಡಿಕೆಶಿಗೆ ಬಿ.ಸಿ ಪಾಟೀಲ್ ತಿರುಗೇಟು

Public TV
2 Min Read

– ರಾಜ್ಯದಲ್ಲಿ ಯಾವ್ದೇ ಕೋಮು ಗಲಭೆಗಳಿಲ್ಲ, ಈಗ ಇರೋದು ಕೊರೊನಾ ಮಾತ್ರ
– ಪಕ್ಷಭೇದ ಬಿಟ್ಟು ಕೊರೊನಾ ಯುದ್ಧದಲ್ಲಿ ಹೋರಾಡೋಣ

ಚಿತ್ರದುರ್ಗ: ಇದು ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ. ಇಂತಹ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ-ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಈ ಸರ್ಕಾರದಲ್ಲಿರುವ ಶಾಸಕರುಗಳ ಹೇಳಿಕೆಗಳು ಕೋಮು ಗಲಭೆಗಳನ್ನು ಸೃಷ್ಟಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿರು. ರಾಜ್ಯದಲ್ಲಿ ಎಲ್ಲೂ ಸಹ ಕೋಮು ಗಲಭೆಗಳ ಆತಂಕದ ಪರಿಸ್ಥಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಈಗ ಇರೋದು ಕೇವಲ ಕೊರೊನಾ ಮಾತ್ರವೆಂದು ಮಾತಿನ ಚಾಟಿ ಬೀಸಿದರು.

ಇದೇ ವೇಳೆ ಈ ಸರ್ಕಾರ ಕೃಷಿ ಹಾಗೂ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತವಾಗಿದೆ ಎಂಬ ಡಿಕೆಶಿ ಟೀಕೆಗೆ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿ, ಕೆಪಿಸಿಸಿಯ ಹಾಲಿ ಅಧ್ಯಕ್ಷರು ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಆದರೂ ಬಿಜೆಪಿ ಸರ್ಕಾರ ಕಂಗೆಡದೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ತಿರುಗೇಟು ನೀಡಿದರು.

ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿ ಕಾರ್ಯ ಕೈಗೊಂಡಿವೆ. ಇಂಥ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರಿಶ್ರಮವಹಿಸಲಾಗಿದೆ. ಬಡವರಿಗೆ ಹಾಲು, ಪಡಿತರ ಪೂರೈಕೆ ಮಾಡಲಾಗ್ತಿದೆ. ರೈತರು ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಹಾಗೆಯೇ ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ, ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದೇವೆ. ರಾಜ್ಯದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ, ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಲ್ಲ. ಹಾಲನ್ನು ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ. ಸರ್ಕಾರ ವಹಿಸಿರುವ ಇಷ್ಟೆಲ್ಲ ಮುತುವರ್ಜಿ, ಕಾರ್ಯ ತತ್ಪರತೆ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಗಾಗಿದೆ. ಹೀಗಾಗಿ ಅವರು ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂತಹ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವರು ಮತ್ತೊಮ್ಮೆ ಪುನರುಚ್ಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *