ಸಿಎಲ್‍ಪಿ ಸಭೆಗೆ ಕೌರವ ಬಿಸಿ ಪಾಟೀಲ್ ಗೈರು

Public TV
2 Min Read

ಬೆಂಗಳೂರು: ರಾಜಕೀಯ ಹೈಡ್ರಾಮದ ನಡುವೆ ಇಂದು ಆಯೋಜನೆಗೊಂಡಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕ ಬಿಸಿ ಪಾಟೀಲ್ ಗೈರು ಹಾಜರಿ ಹಾಕಿದ್ದಾರೆ.

ಮಗಳ ಮದುವೆ ನಿಗದಿಯಾಗಿದೆ. ಹೀಗಾಗಿ ಇಂದಿನ ಸಭೆಯಿಂದ ವಿನಾಯಿತಿ ನೀಡಬೇಕೆಂದು ಕೈ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದರು. ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಬಿಸಿ ಪಾಟೀಲ್ ಗೈರು ಹಾಜರಿ ಹಾಕಿದ್ದಾರೆ.

ಇಂದಿನ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಹಾಜರಾಗದೇ ಇದ್ದರೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಹೀಗಾಗಿ ಬಂಡಾಯ ಎದ್ದಿರುವ ಶಾಸಕರ ನಡೆ ಏನು ಎನ್ನುವುದು ಇಂದಿನ ಸಭೆಯಲ್ಲಿ ಸ್ಪಷ್ಟವಾಗಲಿದೆ.

ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

ವಿಪ್ ಜಾರಿಮಾಡಬಹುದೇ?
ಅಧಿವೇಶನ ನಡೆಯುವ ವೇಳೆ ಮಸೂದೆಯ ಪರ, ವಿರೋಧ ಮತ ಹಾಕಲು ಪಕ್ಷಗಳು ಶಾಸಕರಿಗೆ/ ಸಂಸದರಿಗೆ ವಿಪ್ ಜಾರಿಗೊಳಿಸುತ್ತದೆ. ಆದರೆ ಶಾಸಕಾಂಗ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದರೆ ಅದನ್ನು ವಿಪ್ ಎಂದು ಪ್ರಶ್ನಿಸಬಹುದೇ ಎನ್ನುವ ಪ್ರಶ್ನೆ ಎದ್ದಿದೆ.

1994ರ ರವಿನಾಯಕ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪಕ್ಷಾಂತರ, ವಿಪ್ ಉಲ್ಲಂಘನೆ ಮಾತ್ರವಲ್ಲದೇ ಶಾಸಕರ ನಡವಳಿಕೆಯನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಕ್ರಮ ಕೈಗೊಂಡ ಬಳಿಕ ಶಾಸಕರ ನಡೆ ಪಕ್ಷ ವಿರೋಧಿಯಾಗಿತ್ತು ಎಂದು ಹೇಳಲು ಪಕ್ಷ ಸಾಕ್ಷಾಧಾರವನ್ನು ನೀಡಿ ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ.

ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಶಾಸಕರು ಹಾಜರಾಗಲಿಲ್ಲ. ಈ ಕಾರಣಕ್ಕೆ ಇದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎನ್ನುವ ಅಂಶವನ್ನು ಮುಂದಿಟ್ಟು ಅತೃಪ್ತರ ವಿರುದ್ಧ ಕ್ರಮ ಜರುಗಿಸಬಹುದು ವಿಶ್ವಾಸದಲ್ಲಿ  ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *