ಬೆಂಗ್ಳೂರಿನ 2 ವಾರ್ಡ್‍ಗಳು ಸೀಲ್‍ಡೌನ್ – ಬಿಬಿಎಂಪಿಯಿಂದಲೇ ಆಹಾರ ವಿತರಣೆ

Public TV
2 Min Read

ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸೀಲ್ ಮಾಡಲಾಗುತ್ತದೆ ಎನ್ನುವ ಸುದ್ದಿಗಳ ಮಧ್ಯೆ ನಗರದ ಮಧ್ಯೆ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಅನ್ನು ಸಂಪೂರ್ಣ ಸೀಲ್ ಮಾಡಲು ಬಿಬಿಎಂಪಿ ಮುಂದಾಗಿದೆ.

ಈ ಸಂಬಂಧ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು, ಬಾಪೂಜಿ ನಗರ ವಾರ್ಡ್ 134 & ಪಾದರಾಯನಪುರ ವಾರ್ಡ್ 135ರಲ್ಲಿ ಕೋವಿಡ್ -19  ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಣ ತರಲು ಈ 2 ವಾರ್ಡ್ ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲು ಯೋಜಿಸಿದೆ. ಈ ವಾರ್ಡ್ ಗಳಿಗೆ ಅಗತ್ಯವಿರುವ ಎಲ್ಲಾ ವಸ್ತುಗಳ ಸರಬರಾಜನ್ನು ಬಿಬಿಎಂಪಿ ಮಾಡಲಿದೆ. ಎಲ್ಲ ರೀತಿಯ ವಾಹನ ಸಂಚಾರ ರದ್ದು ಮಾಡಿದ್ದು ಅಗತ್ಯ ವಸ್ತುಗಳನ್ನು ಮನೆಗೆ ಸಾಗಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಬೆಂಗಳೂರು ಸೀಲ್ ಡೌನ್ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ. ಸದ್ಯಕ್ಕೆ ನಿರ್ಧಾರವಿಲ್ಲ, ಬೆಂಗಳೂರಿನ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಬಿಬಿಎಂಪಿ ಆಯುಕ್ತರು ಸೀಲ್‍ಡೌನ್ ಮಾಡಿದ್ದರ ಬಗ್ಗೆ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಯಾವ ಪ್ರದೇಶಗಳನ್ನು ಸೀಲ್ ಮಾಡಬಹುದು ಎನ್ನುವ ಬಗ್ಗೆ ಮತ್ತಷ್ಟು ಪ್ರಶ್ನೆ ಹುಟ್ಟಿದೆ.

ಬೆಂಗಳೂರು ಸೀಲ್ ಸಾಧ್ಯತೆ ಯಾಕೆ?
1. ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣ ಒಟ್ಟು 70 ಕೇಸ್ ದಾಖಲಾಗಿವೆ.
2. ಬೆಂಗಳೂರಿನಲ್ಲಿ ಲಾಕ್ ಡೌನ್ ಪಾಲನೆ ಸರಿಯಾಗಿ ಆಗುತ್ತಿಲ್ಲ. ದಿನಸಿ, ಮಟನ್ ಅಂಗಡಿ ಉಚಿತ ಹಾಲು, ಪೋಸ್ಟ್ ಆಫೀಸ್ ಪಡಿತರ ಅಂಗಡಿ ಮಾರ್ಕೆಟ್ ಎಲ್ಲಾ ಕಡೆ ಮುಗಿಬೀಳುತ್ತಿದ್ದಾರೆ.

3. ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿರೋದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಒಂದು ವೇಳೆ ಲಾಕ್ ಡೌನ್ ಸಡಿಲಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
4. ಬೆಂಗಳೂರಿನಲ್ಲಿ ಅತಿ ಹೆಚ್ಚು ಕೈಗಾರಿಕೆ, ಖಾಸಗಿ ಸಂಸ್ಥೆ, ಸಾರಿಗೆ ವ್ಯವಸ್ಥೆ ಇದೆ. ಸೀಲ್ ಮಾಡದೇ ಹೋದರೆ ಏಕಕಾಲಕ್ಕೆ ಜನ ಹೊರಗಡೆ ಬಂದರೆ ಕೊರೊನಾ ರುದ್ರ ನರ್ತನ ಜೋರಾಗಲಿದೆ.

5. 272 ಜನ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಭಾಗವಹಿಸಿದ್ದರು. ಇದುವರೆಗೂ ಎಲ್ಲರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈಗಾಗಲೇ ನಾಲ್ಕು ತಬ್ಲಿಘಿ ಜಮಾತ್ ನಿಂದ ಪ್ರಕರಣಗಳು ದಾಖಲಾಗಿದೆ. ಹೋಮ್ ಕ್ವಾರಂಟೈನ್ ಒಳಗಾದ ಕೆಲವರು ಮನೆಯಲ್ಲಿರದೇ ಹೊರಗೆ ಓಡಾಡುತ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
6. 27 ವರ್ಷದ ಯುವಕ ಹಾಗೂ 40 ವರ್ಷದ ಪುರುಷ ಇಬ್ಬರಿಗೆ ಟ್ರಾವೆಲ್ ಹಿಸ್ಟರಿಯಿಲ್ಲದೇ ಸೋಂಕು ತಗಲಿದೆ. ಹೀಗಾಗಿ ಬೆಂಗಳೂರಿನ ಕೆಲ ಭಾಗದಲ್ಲಿ ಸಮುದಾಯ ಮಟ್ಟದಲ್ಲಿ ರೋಗ ಹಬ್ಬುವ ಭೀತಿ ಎದುರಾಗಿದೆ. ಇವರಿಬ್ಬರಿಗೆ ಉಸಿರಾಟದ ಸಮಸ್ಯೆ ಇತ್ತು ಅಂತಾ ಹೇಳಿದ್ರೂ ವೈದ್ಯಕೀಯ ತನಿಖೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *