ನಿಯಮ ರೂಪಿಸಿದ ಬಿಬಿಎಂಪಿಯಿಂದಲೇ ಉಲ್ಲಂಘನೆ

Public TV
1 Min Read

– ಅಂಗಡಿ ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ
– ಬಿಬಿಎಂಪಿಗೆ ಇದು ಅನ್ವಯವಾಗುವುದಿಲ್ಲ
– ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬೆಂಗಳೂರು: ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲಿರಬೇಕು ಎಂದು ನಿಯಮ ರೂಪಿಸುವ ಬಿಬಿಎಂಪಿಯೇ ಇದೀಗ ಕನ್ನಡಕ್ಕೆ ದ್ರೋಹ ಮಾಡಿದೆ.

ಬೆಂಗಳೂರಿನಲ್ಲಿ ಪ್ರತಿ ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲೇ ಇರಬೇಕು ಎಂಬ ಹೊಸ ನಿಯಮವನ್ನು ಮೇಯರ್ ಗೌತಮ್ ಕುಮಾರ್ ಜಾರಿಗೆ ತಂದರು. ನಿಯಮ ಪಾಲಿಸದ ಅಂಗಡಿಗಳ ನಾಮ ಫಲಗಳನ್ನು ತೆಗೆದು ಹಾಕಿ, ದಂಡ ವಿಧಿಸಿದರು. ಆದರೆ ಇದೀಗ ಸ್ವತಃ ಬಿಬಿಎಂಪಿಯಿಂದಲೇ ಈ ನಿಯಮ ಉಲ್ಲಂಘನೆಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಕಾರ್ಯಕ್ರಮದ ಮೂರನೇ ಹಂತದ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಲು ತುಮಕೂರಿಗೆ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ ಕೋರಿ ಬಿಬಿಎಂಪಿಯಿಂದ ಫಲಕ ಅಳವಡಿಸಲಾಗಿತ್ತು. ಇದರಲ್ಲಿ ಒಂದಕ್ಷರವೂ ಕನ್ನಡವಿಲ್ಲದೆ, ದೊಡ್ಡಕ್ಷರದಲ್ಲಿ ಪೂರ್ತಿಯಾಗಿ ಇಂಗ್ಲಿಷ್ ನಲ್ಲಿ ಶುಭಕೋರಿ ಫಲಕ ಹಾಕಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರೋಲ್ ಮಾಡುತ್ತಿದ್ದಾರೆ.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಎಂದು ಹೇಳಿದ್ದ ಬಿಬಿಎಂಪಿಯೇ ಕನ್ನಡಕ್ಕೆ ದ್ರೋಹ ಮಾಡಿದೆ ಎಂದು ಬಿಬಿಎಂಪಿ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಗೆ ಸ್ವಾಗತ ಕೋರಿ ಹಾಕಿದ್ದ ದೊಡ್ಡ ಹೂವಿನ ಫಲಕದಲ್ಲಿ ಒಂದೇ ಒಂದು ಕನ್ನಡದ ಅಕ್ಷರವಿಲ್ಲ ಎಂದು ಬಿಬಿಎಂಪಿಯ ಸ್ವಾಗತದ ಫಲಕದ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಈ ಫೋಟೋ ಫುಲ್ ವೈರಲ್ ಆಗಿದೆ.

ಈ ಕುರಿತು ಫೇಸ್ಬುಕಿನಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿ, ನಾಮಫಲಕದಲ್ಲಿ ಶೇಕಡಾ 60ರಷ್ಟು ಕನ್ನಡ ಇರಬೇಕು ಎಂದು ಕಾನೂನು ಮಾಡಿ, ಇಂಗ್ಲಿಷ್ ಭಾಷೆಯಲ್ಲಿ ಸ್ವಾಗತ ಕೋರುತ್ತಿರುವ ಬಿಬಿಎಂಪಿ. ಕರೆ ಮಾಡಿ ಕ್ಯಾಕರಿಸಿ ಉಗಿರಿ ಎಂದು ಕಚೇರಿಯ ದೂರವಾಣಿ ಸಂಖ್ಯೆಯನ್ನು ಹಾಕಿದ್ದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕನ್ನಡ ವಿರೋಧಿ ಬಿಬಿಎಂಪಿಗೆ ಧಿಕ್ಕಾರ. ಕಾನೂನು ಎಲ್ಲರಿಗೂ ಒಂದೇ ತಾನೇ…. ಬಿಬಿಎಂಪಿ ಆಯುಕ್ತರೇ ಎಂದು ಪ್ರಶ್ನಿಸಿ ಸಾಲುಗಳನ್ನು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *