ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಅವರು ಆದೇಶ ನೀಡಿದ್ದು, ಅಂಗಡಿ, ಮುಂಗಟ್ಟು ಸೇರಿದಂತೆ ಕಂಪನಿಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.
ಈ ಕುರಿತು ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದ್ದು, ಕನ್ನಡದಲ್ಲಿ ನಾಮಫಲಕ ಇಲ್ಲದೇ ಹೋದಲ್ಲಿ ಟ್ರೇಡ್ ಲೈಸೆನ್ಸ್ ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಟ್ರೇಡ್ ಲೈಸೆನ್ಸ್ ರದ್ದು ಮಾಡುವ ಆದೇಶವನ್ನು ಬಿಬಿಎಂಪಿ ನೀಡಿರಲಿಲ್ಲ. ಇದೀಗ ಜಾಹೀರಾತು ನಿಯಮದ ಜೊತೆಯಲ್ಲೇ ಇದನ್ನು ಸೇರಿಸಲು ನಿರ್ಧಾರ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಆದೇಶ ಈ ಹಿಂದೆ ನೀಡಿದ್ದರು ಕೂಡ ಈ ಬಾರಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅಂಗಡಿ ಮುಗ್ಗಟ್ಟುಗಳು, ಹೋಟೆಲ್, ಕಂಪನಿಗಳು ಹಾಗೂ ಇತರೇ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಶಾಖೆಯ ಎದುರು ಕನ್ನಡ ನಾಮಫಲಕ ಕಡ್ಡಾಯ ಮಾಡಿ ಪರವಾನಗಿದಾರರುಗಳಿಗೆ ಸೂಚನೆ ನೀಡಲಾಗಿದೆ. ಹೊಸದಾಗಿ ಪರವಾನಗಿ ಅರ್ಜಿ ಸಲ್ಲಿಸುವವರು ಕೂಡ ಕನ್ನಡ ಭಾಷೆ ನಾಮಫಲಕ ಬಳಕೆ ಮಾಡುವುದು ಕಡ್ಡಾಯ ಮಾಡಲಾಗಿದೆ.
ಶೇ.60ರಷ್ಟು ಕನ್ನಡ ಕಡ್ಡಾಯವಾಗಿದ್ದು ಉಳಿದ ಪ್ರಮಾಣದಲ್ಲಿ ಯಾವುದೇ ಭಾಷೆಯನ್ನು ಬಳಕೆ ಮಾಡಬಹುದು. ನಂ.1 ರಿಂದಲೇ ಇದು ಜಾರಿಯಾಗಲಿದ್ದು, ಮುಂದಿನ 1 ತಿಂಗಳ ಅವಧಿಯನ್ನು ಪರವಾನಗಿದಾರರಿಗೆ ನೀಡಲಾಗಿದೆ.