ಬೆಂಗಳೂರಿಗರ ಮೇಲೆ ಟ್ರಾನ್ಸ್ ಪೋರ್ಟ್ ಸೆಸ್: ಸಾರಿಗೆ ಸಚಿವರಿಂದ ಶಾಕ್!

Public TV
2 Min Read

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿ ಭಾರೀ ಟೀಕೆಗೆ ಗುರಿಯಾಗಿರುವ ಸರ್ಕಾರ ಈಗ ವಿಶೇಷವಾಗಿ ಬೆಂಗಳೂರಿಗರ ಮೇಲೆ ವಿಶೇಷ ಸೆಸ್ ಹಾಕಲು ಮುಂದಾಗಿದೆ.

ಹೌದು. ಈಗಾಗಲೇ ನಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೇಲಕ್ಕೆ ಎತ್ತಲು ಹೊಸ ಟ್ರಾನ್ಸ್ ಪೋರ್ಟ್ ಸೆಸ್ ಹಾಕಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಹದಗೆಟ್ಟ ರಸ್ತೆಗಳಿಂದಾಗಿ ಬಿಎಂಟಿಸಿ ಬಸ್‍ಗಳು ಹಾಳಾಗುತ್ತಿದೆ. ಈ ಬಸ್‍ ಗಳ ನಿರ್ವಹಣೆಗೆ ವರ್ಷಕ್ಕೆ ಕೋಟ್ಯಂತರ ರೂ. ಹಣವನ್ನು ಬಿಬಿಎಂಟಿಸಿ ವ್ಯಯಿಸುತ್ತಿದೆ. ಹೀಗಾಗಿ ಬಿಎಂಟಿಸಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಬೆಂಗಳೂರಿಗೆ ಮೇಲೆ ಸಾರಿಗೆ ಸೆಸ್ ಹಾಕುವ ಪ್ರಸ್ತಾಪವನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಬಿಬಿಎಂಪಿ ಮುಂದಿಡಲಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಈ ವಿಚಾರದ ಬಗ್ಗೆ ಬಿಬಿಎಂಪಿಯ ವಿರೋಧಪಕ್ಷ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ರಸ್ತೆಯಲ್ಲಿ ಓಡಾಡುವುದಕ್ಕೆ ಯಾವುದೇ ಸೆಸ್ ಕಟ್ಟಿ ಅಂತ ಜನರಿಗೆ ಹೇಳುವುದಕ್ಕೆ ಆಗೋದಿಲ್ಲ. ಯಾಕೆಂದರೆ ಸಾರ್ವಜನಿಕರು ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡುತ್ತಾರೆ. ಅದೇ ತೆರಿಗೆಯಲ್ಲಿ ಸರ್ಕಾರ ರಸ್ತೆ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳ ವ್ಯವಸ್ಥೆ ನಿರ್ವಹಣೆ ಮಾಡಬೇಕು. ರಸ್ತೆ ವಿಚಾರಕ್ಕೆ ಬಂದಾಗ ಪ್ರತಿಯೊಂದು ವಾಹನ ಖರೀದಿಸಿದಾಗ ಸಾರಿಗೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಲಾಗುತ್ತದೆ. ಹೀಗಿರುವಾಗ ಸೆಸ್ ಕಟ್ಟಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಡಿಸಿ ತಮ್ಮಣ್ಣ ವಿರುದ್ಧ ಬಿಬಿಎಂಪಿ ಪಾಲಿಕೆ ಸದಸ್ಯರು ಗರಂ ಆಗಿದ್ದು, ಈಗಾಗ್ಲೇ ಹಲವು ಸೆಸ್ ಗಳನ್ನು ಜನ ಕಟ್ಟುತ್ತಿದ್ದಾರೆ. ಈ ಮಧ್ಯೆ ಹೊಸ ಸೆಸ್ ಹಾಕೋ ಯಾವುದೇ ಪ್ರಸ್ತಾವನೆ ಸರಿಯಲ್ಲ. ಬಿಎಂಟಿಸಿ ಬಸ್ ಗಳೇ ಸಾಕಷ್ಟು ಜಾಹೀರಾತು ಹಾಕೊಂಡು ಬೆಂಗಳೂರಿನ ತುಂಬಾ ಓಡಾಡುತ್ತಿವೆ. ಬಿಎಂಟಿಸಿ ಓಡಾಡೋದ್ರಿಂದಲ್ಲೇ ನಮ್ಮ ರಸ್ತೆಗಳು ಹಾಳಾಗಿವೆ. ಹೀಗಾಗಿ ಬಿಎಂಟಿಸಿಯೇ ಬಿಬಿಎಂಪಿಗೆ ತೆರಿಗೆ ಕಟ್ಟಲಿ ಎಂದು ಕಿಡಿಕಾರಿದ್ದಾರೆ.

ಸಾರಿಗೆ ಸೆಸ್ ಹಾಕುವ ನಿರ್ಧಾರಕ್ಕೆ ಮೇಯರ್ ಸಂಪತ್‍ ರಾಜ್ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಪ್ರಸ್ತಾಪ ಬಿಬಿಎಂಪಿಗೆ ಬಂದಿಲ್ಲ. ಸಚಿವರು ಈ ರೀತಿಯ ಸೆಸ್ ಹಾಕುವ ವಿಚಾರ ಹೇಳಿದ್ದು ಗಮನಕ್ಕೆ ಬಂದಿದೆ. ಬಿಎಂಟಿಸಿ ಬಸ್ ಗಳ ಓಡಾಟದಿಂದ ನಮ್ಮ ರಸ್ತೆಗಳು ಹಾಳಾಗುತ್ತಿವೆ ಎನ್ನುವ ವಿಚಾರ ಹಲವು ಬಾರಿ ಪಾಲಿಕೆಯಲ್ಲಿ ಚರ್ಚೆಯಾಗಿದೆ. ಸೆಸ್ ವಿಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜಾರಿಯಾಗುವ ಮೊದಲು ಸರ್ಕಾರದ ವಲಯದಲ್ಲಿರುವ ಚರ್ಚೆಯಾಗಬೇಕು. ಪಾಲಿಕೆಯಲ್ಲಿ ಚರ್ಚೆಯಾಗಬೇಕು. ಇದೂವರೆಗೂ ಈ ಪ್ರಸ್ತಾಪ ನಮಗೆ ಬಂದಿಲ್ಲ. ಬಂದ ಮೇಲೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *