ಲಕ್ಷ ಲಕ್ಷ ಸಂಬಳ- ಕಚೇರಿಗೆ ಬರೋದು ಮಾತ್ರ ಮನಸ್ಸಿಗೆ ತೋಚಿದಂತೆ

Public TV
2 Min Read

-ಬಿಬಿಎಂಪಿ ಕಚೇರಿಯಲ್ಲಿನ ಬಯೋಮೆಟ್ರಿಕ್‍ನಲ್ಲಿ ಟೈಂ ಉಲ್ಟಾ ಸ್ವಾಮಿ!
-ಸಿಎಂ ಸೂಚನೆಗೂ ಸಿಗ್ತಿಲ್ಲ ಮರ್ಯಾದೆ!

ಬೆಂಗಳೂರು: ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಎಂಬ ಮಾತಿದೆ. ಆದರೆ ಈ ಮಾತು ಕೇವಲ ಪುಸ್ತಕದಲ್ಲಿ ನೋಡಲು ಮತ್ತು ಭಾಷಣಗಳಲ್ಲಿ ಕೇಳಲು ಚೆನ್ನಾಗಿರುತ್ತದೆ. ಕೆಲಸವನ್ನು ದೇವರು ಎಂದು ತಿಳಿದುಕೊಳ್ಳುವುದು ದೂರದ ಮಾತು. ಕಾರ್ಯನಿರ್ವಹಿಸುವ ಕಚೇರಿಗೆ ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಂದರೆ ಸಾಕಪ್ಪ ಎಂದು ಸಾರ್ವಜನಿಕರು ಕಾಯುತ್ತಿರುತ್ತಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಎಣಿಸುವ ಬಿಬಿಎಂಪಿ ಅಧಿಕಾರಿಗಳು ತಮಗೆ ಅನೂಕುಲವಾಗುವಂತೆ ಬಯೋಮೆಟ್ರಿಕ್ ಯಂತ್ರವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಹಾಜರಾತಿ ಕಡ್ಡಾಯ ಮತ್ತು ಸರಿಯಾದ ಸಮಯಕ್ಕೆ ಅಧಿಕಾರಿಗಳು ಬರಬೇಕೆಂದು ಸರ್ಕಾರ ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸಿದೆ. ಇದೀಗ ಅಧಿಕಾರಿಗಳು ತಾವು ಬರುವ ಸಮಯಕ್ಕೆ ಅನೂಕುಲವಾಗುವಂತೆ ಸಮಯವನ್ನು ನಿಗದಿ ಮಾಡಿಕೊಂಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಆರಂಭದಲ್ಲಿ ವಿಧಾನಸೌಧದ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಖಡಕ್ ವಾರ್ನಿಂಗ್ ನೀಡಿದ್ದರು. ಇನ್ ಟೈಂನಲ್ಲಿ ಬರಬೇಕು ಎಂದು ವಿಧಾನಸೌಧ ಸಿಬ್ಬಂದಿಗೆ ಬರಬೇಕೆಂದು ಫರ್ಮಾನು ಹೊರಡಿಸಿದ್ದರು. ಬಿಬಿಎಂಪಿ ಅಧಿಕಾರಿಗಳು ಸೂರ್ಯ ನೆತ್ತಿಯ ಮೇಲೆ ಬಂದರೂ ಕಚೇರಿಯತ್ತ ಮುಖ ಮಾಡಲ್ಲ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬಿಬಿಎಂಪಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.

ಸರ್ಕಾರಿ ಕಚೇರಿಗಳಿಗೆ ನೌಕರರು ನಿಗದಿತ ಸಮಯಕ್ಕೆ ಬರಲ್ಲ ಎನ್ನುವ ಆಪಾದನೆ ಇಂದು ಸಹ ನಿಜವಾಗಿದೆ. ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ರು ಪ್ರಯೋಜನವಾಗಿಲ್ಲ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿಯಲ್ಲೂ ನೌಕರರಿಲ್ಲ. ಪಬ್ಲಿಕ್ ಟಿವಿ ಕಚೇರಿ ಸಮಯಕ್ಕೆ ಬಿಬಿಎಂಪಿ ಪ್ರವೇಶಿಸಿದಾಗ ಕೇವಲ ಬೆರಳಿಣಿಕೆಯಷ್ಟು ಸಿಬ್ಬಂದಿ ಕಾಣಸಿಗುತ್ತಾರೆ. ಮೇಲಾಧಿಕಾರಿಗಳೇ 11 ಗಂಟೆ ಆಗಮಿಸಬೇಕಾದ್ರೆ ಸಿಬ್ಬಂದಿ ವರ್ಗ ಸಹ ಅದೇ ಚಾಳಿಯನ್ನು ಆರಂಭಿಸಿಗೊಂಡಿದೆ.

ಬಿಬಿಎಂಪಿ ಆಯುಕ್ತ ಆಗಿದ್ದ ಮಂಜುನಾಥ ಪ್ರಸಾದ್ ಗಂಟೆ 11 ಆಗಿದ್ರು ಕಚೇರಿ ಕಡೆ ತಲೆ ಹಾಕುತ್ತಿರಲಿಲ್ಲ. ಇನ್ನು ಬಿಬಿಎಂಪಿ ಕಮೀಷನರ್ ಸಿಕ್ತಿಲ್ಲ ಎಂದು ಡಿಪಿಆರ್ ಗೆ ಸಹ ಮಾಹಿತಿ ನೀಡಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಪತ್ರ ಬರೆದಿದ್ದರು. ಜಂಟಿ ಆಯುಕ್ತ ಕಚೇರಿ, ಮುಖ್ಯ ಅಭಿಯಂತರ ಕಚೇರಿಗಳು ಹಾಗೂ ಅನೆಕ್ಸ್ ಕಟ್ಟಡಗಳ ಕಚೇರಿಗಳು ಬಹುತೇಕ ಸಿಬ್ಬಂದಿ ಬರೋದು11.30 ರ ನಂತರ ಹಾಗಾಗಿ ಕಚೇರಿಗಳ ಕುರ್ಚಿಗಳು ಖಾಲಿ ಖಾಲಿ ಆಗಿರುತ್ತವೆ.

ವಿಧಾನಸೌಧ ಮಾತ್ರವಲ್ಲ, ಸಿಎಂ ದಿಢೀರ್ ಅಂತ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್ ಎಸ್ ಬಿ ಸೇರಿದಂತೆ ಎಲ್ಲ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿದೆ. ಆಗಾದರೂ ಸಮಯಕ್ಕೆ ಸಿಬ್ಬಂದಿ ಮಾನ್ಯತೆ ಕೊಡ್ತಾರಾ ಅಂತ ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *