ಫ್ಲೆಕ್ಸ್ ತೆರವು ಮಾಡದಿದ್ರೆ ಅಮಾನತು ಶಿಕ್ಷೆ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಎಚ್ಚರಿಕೆ

Public TV
1 Min Read

ಬೆಂಗಳೂರು: ನಗರದಲ್ಲಿಂದು ಬೆಳ್ಳಂಬೆಳಗ್ಗೆಯೇ ಮೇಯರ್ ಸಂಪತ್ ರಾಜ್ ರವರು ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವು ಕಾರ್ಯಾಚರಣೆಯನ್ನು ಬಿರುಸಿನಿಂದ ಕೈಗೊಂಡಿದ್ದಾರೆ.

ಶನಿವಾರದಿಂದ ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವುಗೊಳಿಸುವ ಕಾರ್ಯಾಚರಣೆಯ ಅಭಿಯಾನಕ್ಕೆ ಮೇಯರ್ ರವರು ಚಾಲನೆ ನೀಡಿದ್ದರು. ಇಂದು ಬೆಳ್ಳಂಬೆಳಗ್ಗಿನಿಂದಲೇ ಕಾರ್ಯಪ್ರವೃತರಾದ ಅವರು ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಜೀವನ್‍ಭೀಮಾ ನಗರ ವಾರ್ಡ್ ಮತ್ತು ಹೊಯ್ಸಳನಗರ ವಾರ್ಡಿನ ಅಧಿಕಾರಿಗಳ ವಿರುದ್ಧ ಗರಂ ಆಗಿ, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜೀವನ್‍ಭೀಮಾ ನಗರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಪ್ರಸನ್ನರವರನ್ನು ತರಾಟೆಗೆ ತೆಗೆದುಕೊಂಡ ಅವರು, ಈಗಾಗಲೇ ಎಲ್ಲಾ ನಾಮಫಲಕಗಳನ್ನು ಶೇಕಡ 60ರಷ್ಟು ಕನ್ನಡದಲ್ಲೇ ನಮೂದಿಸಬೇಕು ಎಂಬ ನಿಯಮವನ್ನು ರೂಪಿಸಿದ್ದರೂ, ಇದರು ಕುರಿತು ನೀವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಫ್ಲೆಕ್ಸ್ ಹಾಗೂ ಭಿತ್ತಿಪತ್ರಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದರೂ ನೀವು ಪಾಲಿಸಿಲ್ಲ. ಇನ್ನುಮುಂದೆ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಕಂಡುಬಂದಲ್ಲಿ ಅಮಾನತು ಮಾಡಲಾಗುವುದು ಎಂದು ಸ್ಥಳದಲ್ಲೇ ಎಚ್ಚರಿಸಿದರು.

ಈ ವೇಳೆ ರಸ್ತೆಯಲ್ಲಿ ಸಿಕ್ಕ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ಬುದ್ಧಿಮಾತನ್ನು ಹೇಳಿ, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜ ಮಾರದಂತೆ ಸೂಚನೆ ನೀಡಿದ್ದು, ಕೇವಲ ಬಟ್ಟೆಯಲ್ಲಿ ತಯಾರಿಸಿದ ಧ್ವಜಗಳನ್ನ ಮಾತ್ರ ಮಾರಾಟ ಮಾಡುವಂತೆ ಸೂಚಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಧ್ವಜಗಳನ್ನು ಕಿತ್ತುಕೊಳ್ಳಲು ಮುಂದಾದಾಗ, ಹೋಗಲಿ ಈ ಸಾರಿ ಬಿಡಿ, ಮತ್ತೊಮ್ಮೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕ್ರಮತೆಗೆದುಕೊಳ್ಳಿ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *