ಬಿಬಿಎಂಪಿ ಮೇಯರ್ ಅಭ್ಯರ್ಥಿ – ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದ ಕಟೀಲ್

Public TV
2 Min Read

ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಯಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದಿದ್ದಾರೆ.

ಹೌದು. ಕಳೆದ 4 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅಥವಾ ಎಲ್ ಶ್ರೀನಿವಾಸ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು. ಆದರೆ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಪರ ನಳೀನ್ ಕುಮಾರ್ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಹೈಕಮಾಂಡ್ ಗೌತಮ್ ಹೆಸರು ಆಯ್ಕೆ ಮಾಡಿದ್ದು ಮೇಯರ್ ಆಯ್ಕೆ ವಿಚಾರದಲ್ಲೂ ಬಿಎಸ್‍ವೈಗೆ ಹಿನ್ನಡೆಯಾಗಿದೆ. ಪಕ್ಷ ಸಂಘ ನಿಷ್ಠೆ ಹೊಂದಿದವರಿಗೆ ಮೇಯರ್ ಪಟ್ಟ ನೀಡಲು ಮುಂದಾದ ಹಿನ್ನೆಲೆಯಲ್ಲಿ ಗೌತಮ್ ಕುಮಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ಸರ್ಕಾರ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿತ್ತು. ಆದರೆ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಇಂದೇ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸೋಮವಾರ ರಾತ್ರಿ ಯಡಿಯೂರಪ್ಪ ಮೇಯರ್ ಚುನಾವಣೆ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿಗೆ ಬರಬೇಕಿತ್ತು. ಆದರೆ ತಾನು ಸೂಚಿಸಿದ ವ್ಯಕ್ತಿಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಶಿಕಾರಿಪುರದಲ್ಲೇ ಇರಲು ನಿರ್ಧರಿಸಿದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಪದ್ಮನಾಭ ರೆಡ್ಡಿ ಸೋತಿದ್ದು ಎಲ್ಲಿ?
ಕಳೆದ ನಾಲ್ಕು ವರ್ಷವೂ ಬಿಬಿಎಂಪಿ ವಿಪಕ್ಷ ನಾಯಕನಾಗಿದ್ದೂ ಮಾತ್ರವಲ್ಲದೇ ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಪಕ್ಷದ ಪಾಲಿಕೆ ಸದಸ್ಯರಲ್ಲಿ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಮೇಯರ್ ಅಭ್ಯರ್ಥಿಯಾಗುವುದು ತಪ್ಪಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆ ಜಾರ್ಜ್ ವಿರುದ್ಧ ಸರ್ವಜ್ಞನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಲ್ಲುವಂತೆ ಸೂಚಿಸಲಾಗಿತ್ತು. ಖುದ್ದು ಹೈಕಮಾಂಡ್ ಸೂಚನೆ ನೀಡಿದ್ದರೂ ಪದ್ಮನಾಭ ರೆಡ್ಡಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಮುಖ್ಯವಾಗಿ ಪದ್ಮನಾಭ ರೆಡ್ಡಿ ಯಡಿಯೂರಪ್ಪ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆ ಇವರು ಮೂಲ ಬಿಜೆಪಿಯವರಲ್ಲ. ಜೆಡಿಎಸ್‍ನಿಂದ ವಲಸೆ ಬಂದಿದ್ದಾರೆ ಎನ್ನುವುದನ್ನು ಪರಿಗಣಿಸಿ ಆಯ್ಕೆ ಮಾಡಿಲ್ಲ ಎಂಬ ವಿಚಾರ ತಿಳಿದುಬಂದಿದೆ.

ಗೌತಮ್ ಆಯ್ಕೆಗೆ ಕಾರಣ:
ಮೊದಲನೆಯದು ಸಂಘದ ನಿಷ್ಠರಾಗಿರುವುದು ಪ್ರಮುಖ ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹ್ಯಾರಿಸ್ ವಿರುದ್ಧ ಸ್ಪರ್ಧಿಸಲು ಶಾಂತಿನಗರ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ ಯಡಿಯೂರಪ್ಪ ಮತ್ತು ತಂಡ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿರಲಿಲ್ಲ. ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿಸಿ ಮೋಹನ್ ಬೆಂಬಲ ಗೌತಮ್ ಅವರಿಗೆ ಇದೆ. ಮೂಲ ಬಿಜೆಪಿಯವರಿಗೆ ಹೆಚ್ಚು ಪ್ರಾಧನ್ಯತೆ ನೀಡಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಗೌತಮ್ ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಈ ಎಲ್ಲ ಕಾರಣದ ಜೊತೆಗೆ ನಳೀನ್ ಕುಮಾರ್ ಕಟೀಲ್ ಬೆಂಗಳೂರಿನ ನಾಯಕರ ಮಾತನ್ನು ಆಲಿಸಿದರೂ ಸಂಘ ಪರಿವಾರದ ಮುಖಂಡರ ನಿರ್ಧಾರ ಕೇಳಿದರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನವನ್ನೇ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮೇಯರ್ ಅಭ್ಯರ್ಥಿಯನ್ನಾಗಿ ಗೌತಮ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *