ಬೆಂಗಳೂರು: ಬಿಬಿಎಂಪಿಯಲ್ಲಿ ರಾತ್ರೋ ರಾತ್ರಿ ದೇವರ ಪ್ರತಿಷ್ಠಾಪನೆ ನಡೆದಿದೆ. ನಿವೃತ್ತ ನೌಕರರ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಹಾಕುವ ಸಲುವಾಗಿಯೇ ಅಭಯ ಆಂಜನೇಯ ಉದ್ಭವಿಸಿದ್ದಾನೆ.
ನಿವೃತ್ತ ನೌಕರರ ಭವನ ನಿರ್ಮಾಣ ತಡೆಗಟ್ಟಲು ಹಾಲಿ ನೌಕರರ ಸಂಘ ಕಸರತ್ತು ನಡೆಸಿದೆ. ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಹನುಮನ ವಿಗ್ರಹ ಪ್ರತಿಷ್ಠಾಪಿಸಿ ಹೊಸ ಭವನ ನಿರ್ಮಾಣಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತೇಶ್ ಮಾಡುತ್ತಾ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಬಿಎಂಪಿ ಜಾಗದಲ್ಲಿ ನಿವೃತ್ತ ನೌಕರರ ಭವನ ನಿರ್ಮಾಣ ಮಾಡುವುದಕ್ಕೆ ಬಿಬಿಎಂಪಿ ಕೌನ್ಸಿಲ್ ಅನುಮತಿ ಕೊಟ್ಟಿದೆ. ಅಷ್ಟೇ ಅಲ್ಲದೇ 2018-19ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ 40 ಲಕ್ಷ ಅನುದಾನ ಸಹ ನೀಡಲಾಗಿದೆ. ಆದರೆ ಅಮೃತೇಶ್ ಗೆ ನಿವೃತ್ತ ನೌಕರರ ಮೇಲೆ ಅದೇನ್ ಸಿಟ್ಟೋ ಏನೋ, ನಿವೃತ್ತ ಬಿಬಿಎಂಪಿ ನೌಕರರ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಯುಕ್ತರು ಹಾಗೂ ಮೇಯರ್‍ಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಮೃತೇಶ್ ಮನವಿಗೆ ಕಿಮ್ಮತ್ತು ಸಿಕ್ಕಿರಲಿಲ್ಲ. ಹೀಗಾಗಿ ದಿಢೀರ್ ಎಂದು ಹನುಮನ ವಿಗ್ರಹ ಪ್ರತಿಷ್ಠಾಪಿಸಿರುವ ಅವರು, ಅದಕ್ಕೆ ನಿತ್ಯ ಪೂಜೆ ಬೇರೆ ಮಾಡುತ್ತಾ ಇದ್ದಾರೆ. ಇದೀಗ ಇದಕ್ಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗುತ್ತಿದೆ.