ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

Public TV
1 Min Read

ಬೆಂಗಳೂರು: ಒಂದು ಕಡೆ ಬಂಟ್ವಾಳದಲ್ಲಿರೋ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ನಿಯಮಾವಳಿಗಳ ಹೆಸರಿನಲ್ಲಿ ಅನುದಾನ ನಿಲ್ಲಿಸಿ ಮಕ್ಕಳ ಊಟ ಕಿತ್ತುಕೊಂಡ ಸಿದ್ದರಾಮಯ್ಯ ಸರ್ಕಾರ ಈಗ ಸಚಿವ ಜಾರ್ಜ್ ಕ್ಷೇತ್ರದಲ್ಲಿರೋ ದಾರುಲ್ ಉಲೂಮ್ ಅರೇಬಿಕ್ ಕಾಲೇಜಿಗೆ ಹಣದ ಹೊಳೆಯನ್ನೇ ಹರಿಸಿದೆ.

ಸಚಿವ ಜಾರ್ಜ್ ಒತ್ತಡದಿಂದಲೋ ಅಥವಾ ಅಲ್ಪಸಂಖ್ಯಾತರ ಮೇಲಿನ ಪ್ರೀತಿಯಿಂದಲೂ ಕೋಟಿ ಕೋಟಿ ಹಣ ಅರೇಬಿಕ್ ಕಾಲೇಜಿಗೆ ನೀಡಲಾಗಿದೆ. ಅರೇಬಿಕ್ ಕಾಲೇಜಿನ ಆವರಣದಲ್ಲಿ ಧಾರ್ಮಿಕ ಗುರು ದಿವಂಗತ ಆಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದರೆ, ಪೈಪೋಟಿಗೆ ಬಿದ್ದಂತೆ ಬಿಬಿಎಂಪಿಯೂ ಅರೇಬಿಕ್ ಕಾಲೇಜಿಗೆ 10 ಕೋಟಿ ರೂ. ಹಾಗೂ ಜಾಮಿಯ ಉಲ್ ಉಲಾಮು ಗ್ರೂಪ್ ಶಾಲಾ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬಜೆಟ್ ನಲ್ಲಿ ಘೋಷಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಅರೇಬಿಕ್ ಕಾಲೇಜಿನ ಮೇಲೆ ಇಷ್ಟೊಂದು ಪ್ರೀತಿ ಯಾಕೆ ಅಂತ ಹುಡುಕುತ್ತಾ ಹೋದರೆ ಅಸಲಿ ಉತ್ತರವೇ ಬೇರೆ ಇದೆ. ಉತ್ತರ ಭಾರತದ ಮುಸ್ಲಿಮರಿಗೆ ದೆಹಲಿಯ ಜಾಮೀಯಾ ಮಸೀದಿ ಶಾಹಿ ಇಮಾಮ್ ಆದೇಶ ಹೇಗೆ ಪವಿತ್ರವೋ ಹಾಗೆ ಕರ್ನಾಟಕದ ಬಹುತೇಕ ಮುಸ್ಲಿಮರಿಗೆ ಈ ಅರೇಬಿಕ್ ಕಾಲೇಜು ನೀಡುವ ಆದೇಶವೇ ವೇದವಾಕ್ಯ. ಇಲ್ಲಿನ ಧರ್ಮಗುರು ನೀಡುವ ಒಂದೇ ಒಂದು ವಾಕ್ಯಕ್ಕೆ ರಾಜಕೀಯ ಮುಖಂಡರು ಎಡತಾಕುತ್ತಲೇ ಇರುತ್ತಾರೆ. ಪ್ರಮುಖರ ಓಲೈಕೆಗೆ ನಿತ್ಯವೂ ಮುಂದಾಗುತ್ತಾರೆ.

ಕೇವಲ ಚುನಾವಣೆಗೋಸ್ಕರ, ಮತಗಳಿಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ರೀತಿಯೂ ಅಲ್ಪಸಂಖ್ಯಾತರ ಮನವೊಲಿಕೆಯಲ್ಲಿ ತೊಡಗುತ್ತಾ? ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯ ಮಕ್ಕಳು ಊಟವಿಲ್ಲದೆ ಪರಿತಪಿಸಿದ ದೃಶ್ಯ ಸರ್ಕಾರದ ಕಣ್ಣಿಗೆ ಕಾಣಲಿಲ್ವಾ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *