ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಗೆ ಬೀಗ ಜಡಿದ ಪ್ರಕರಣ ಮಾಸುವ ಮುನ್ನವೇ ಬಿಗ್‌ಬಾಸ್ (Bigg Boss) ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ವಿರುದ್ಧ ದೂರು ದಾಖಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಹ ಸ್ಪರ್ಧಿ ರಕ್ಷಿತಾ (Rakshita Shetty) ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ ‘She is S, ಆ Category ನ ಎಂದು ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.
ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಆಗಿದ್ದೇನು?
ರಕ್ಷಿತಾ ರಾತ್ರಿ ಕ್ಯಾಮೆರಾ ಮುಂದೆ ಮಾತನಾಡುತ್ತಿರುವುದನ್ನು ನೋಡಿ ಮನೆಯವರಿಗೆಲ್ಲ ಫನ್ ಮಾಡಲು ರಾತ್ರಿ ಮಲಗಿದ್ದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಗೆಜ್ಜೆಯನ್ನು ಹಿಡಿದು ಅಲ್ಲಾಡಿಸಿದ್ದರು. ಮನೆಯವರು ಗೆಜ್ಜೆ ಧ್ವನಿ ಮಾಡಿದವರು ಯಾರು ಎಂದು ಕೇಳಿದಾಗ ಅದು ರಕ್ಷಿತಾಳ ಕೆಲಸ ಎಂದು ಸುಳ್ಳು ಹೇಳಿದ್ದರು.
ಈ ವಿಚಾರದ ಬಗ್ಗೆ ರಕ್ಷಿತಾ ಪ್ರಶ್ನೆ ಮಾಡಿದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಜೋರು ಧ್ವನಿಯಲ್ಲಿ ಮಾತನಾಡಿ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ಹೋದಾಗಲೂ ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪಿರಲಿಲ್ಲ.
ಮರುದಿನ ಮನೆಯ ವರಾಂಡದಲ್ಲಿ ಜಾಹ್ನವಿ ಜೊತೆ ಅಶ್ವಿನಿ ಕುಳಿತು ರಾತ್ರಿ ನಡೆದ ಗಲಾಟೆಯ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಉದ್ದೇಶಿಸಿ ಅವಳು ʼಎಸ್ ಕೆಟಗೆರಿʼ ಎಂದು ಹೇಳಿದ್ದರು.

