ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ

Public TV
2 Min Read

ಚಂಡೀಗಢ: ಹೃದಯಾಘಾತಕ್ಕೆ (Heart attack) ಬಲಿಯಾಗುವವರ ಸಂಖ್ಯೆ ಹೆಚ್ಚಾಗಿತ್ತಲೇ ಇದ್ದು, ಇಂದು ಪಂಜಾಬ್‌ನ ಫೀರೋಜ್‌ಪುರ್‌ನಲ್ಲಿ ಕ್ರಿಕೆಟ್ (Cricket) ಆಡುವಾಗಲೇ ಪಿಚ್‌ನಲ್ಲಿ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಬ್ಯಾಟರ್ ಮೃತಪಟ್ಟಿದ್ದಾನೆ.

ಭಾನುವಾರ ಪಂಜಾಬ್​ನಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಯುವಕನೊಬ್ಬ ಬಲವಾದ ಸಿಕ್ಸರ್ ಬಾರಿಸಿದ್ದಾನೆ. ಇದಾದ ನಂತರ ನಾನ್ ಸ್ಟ್ರೈಕ್​ ಆಟಗಾರನ ಬಳಿಗೆ ಬಂದಿದ್ದ ಆತ ಕ್ರೀಸ್‌ನಲ್ಲೇ ಕುಸಿದು ಬಿದ್ದಿದ್ದಾನೆ. ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಸಹ ಆಟಗಾರನಿಗೂ ಅರಿಯದಾಗಿದೆ. ಕೂಡಲೇ ಆತ ಕುಸಿದು ಬಿದ್ದಿದ್ದ ಆಟಗಾರನನ್ನು ಮೇಲೆತ್ತಲ್ಲು ಪ್ರಯತ್ನಿಸಿದ್ದಾನೆ. ಇತ್ತ ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಆತನ ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಹೃದಯಾಘಾತದಿಂದ ಆ ಯುವ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿಹೋಗಿದೆ.

ಸಾಂದರ್ಭಿಕ ಚಿತ್ರ

10 ಸೆಕೆಂಡ್‌ನಲ್ಲಿ ಏನಾಯ್ತು?
ಇಂದು (ಜೂ.29) ಬೆಳಗ್ಗೆ ಪಂಜಾಬ್​ನ ಗುರುಹರ್ ಸಹಾಯ್ ಪ್ರದೇಶದ ಡಿಎವಿ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ, ಹರ್ಜೀತ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲರ್ ಎಸೆದ ವೇಗದ ಚೆಂಡನ್ನು ಬೌಂಡರಿಯಿಂದಾಚೆಗೆ ಬೃಹತ್ ಸಿಕ್ಸರ್ ಬಾರಿಸಿದರು. ಇದರ ನಂತರ, ನಾನ್ ಸ್ಟ್ರೈಕರ್ ಬಳಿಗೆ ಹೆಜ್ಜೆ ಹಾಕಿದ್ದಾನೆ. ಆದರೆ ಆ ವೇಳೆಗೆ ಆತನಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತ ಕ್ರೀಸ್‌ನಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಸಹ ಆಟಗಾರ ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.

ಇದಾದ ನಂತರ, ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಹರ್ಜೀತ್ ಬಳಿಗೆ ಬಂದು ಅವರನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ, ಆದರೆ ಆ ಹೊತ್ತಿಗೆ ಹರ್ಜೀತ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಕೆಲವು ಆಟಗಾರರು ಅವನಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರಾದರೂ ಅವನನ್ನು ಬದುಕಿಸಲು ಸಾಧ್ಯವಾಗಿಲ್ಲ. ಇದೀಗ ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೃದಯಾಘಾತಕ್ಕೂ ಮುನ್ನ ಹರ್ಜೀತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 49 ರನ್ ಕಲೆಹಾಕಿದ್ದರು. ಅದರೆ ಅವರ ಅರ್ಧಶತಕವನ್ನು ಪೂರೈಸುವ ಮುನ್ನವೇ ಹೃದಯಾಘಾತವೆಂಬ ಮಾರಿ ಅವರ ಇಹಲೋಕ ಯಾತ್ರಗೆ ಫುಲ್​ಸ್ಟಾಪ್ ಹಾಕಿದೆ.

Share This Article