ನಾನು ಸಚಿವನಾದ್ರೆ ಪುರುಷರಿಗೂ ಬಸ್‌ ಪ್ರಯಾಣ ಫ್ರೀ: ಬಸವರಾಜ ರಾಯರೆಡ್ಡಿ

Public TV
1 Min Read

ಕೊಪ್ಪಳ: ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ, ನಾನು ಸಚಿವನಾದರೆ ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡುತ್ತೇನೆ. ನನ್ನನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ನೋಡೋಣ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳದ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಬಾಲಕಿಯರ ನೂತನ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನನ್ನನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದೊಮ್ಮೆ ನನ್ನನ್ನು ಹಣಕಾಸು ಸಚಿವನಾಗಿ ಮಾಡಿದರೆ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೇನೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾದರೆ, ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡುತ್ತೇವೆ. ನಾನು ಗ್ಯಾರಂಟಿಗೆ ವಿರೋಧ ಮಾಡಲ್ಲ. ನಾನು ಜನರ ಮುಂದೆ ತಮಾಷೆ ಆಗಿ ಮಾತನಾಡಿದ್ದನ್ನೆಲ್ಲ ಮಾಧ್ಯಮದವರು ವರದಿ ಮಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಎಲ್ಲ ಅಭಿವೃದ್ಧಿ ಕೆಲಸ ಆಗುತ್ತಿವೆ. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಹಿಂದಿನ‌ ಸರ್ಕಾರ ಸುಮಾರು 2.5 ಲಕ್ಷ ಕೋಟಿ ರೂ. ಬಿಲ್ ಬಾಕಿ ಉಳಿಸಿತ್ತು. ಈ ಭಾರ ನಮ್ಮ ತಲೆ‌ ಮೇಲೆ ಬಿಜೆಪಿ ಅವರು ಹಾಕಿದ್ದಾರೆ. ಇದರಿಂದ ಒಂದಷ್ಟು ಸಮಸ್ಯೆ ಆಗಿದೆ ಅಷ್ಟೇ ಎಂದರು.

ನೀರಾವರಿ ಮಾಡುವುದು ಸುಲಭವಲ್ಲ. ನರೇಂದ್ರ ಮೋದಿ ಯಾವ ರಾಜ್ಯದ ಒಬ್ಬ ಸಿಎಂಗಳನ್ನು ಕರೆದು ಮಾತನಾಡಿಲ್ಲ. ತಾಂತ್ರಿಕ ಸಮಸ್ಯೆಗಳು ಇರುತ್ತವೆ. ಬಿಜೆಪಿಯವರು ಸುಮ್ಮನೇ ಆರೋಪ ಮಾಡುತ್ತಾರೆ. ಜಲ ಹಂಚಿಕೆ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

Share This Article