ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ

Public TV
2 Min Read

ಬೆಂಗಳೂರು: ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ ಕೋವಿಡ್-19 ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿಯಾಗಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಹೋಟೆಲ್‍ಗಳಿಗೆ ನೀಡಲು ಬೆಸ್ಕಾಂ ಸಮ್ಮತಿಸಿದೆ.

ಬೃಹತ್ ಬೆಂಗಳೂರು ಹೋಟೆಲ್‍ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ನೇತೃತ್ವದ ಸಂಘ ಪದಾಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆದಿದೆ. ಈ ವೇಳೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಅವರು, ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಹೋಟೆಲ್ ಮತ್ತು ಫಲಹಾರ ಮಂದಿರಗಳ ವಿವರಗಳನ್ನು ವಲಯವಾರು ನೀಡಿದ್ದಲ್ಲಿ ಏಪ್ರಿಲ್ 2021 ರಿಂದ ಜೂನ್ 2021 ರ ಅವಧಿಯವರೆಗಿನ ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಯನ್ನು ಪಡೆಯಬಹುದು ಭರವಸೆ ಕೊಟ್ಟರು. ಇದನ್ನೂ ಓದಿ: ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ 

ಕೋವಿಡ್ ಹಿನ್ನೆಲೆ ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ 3 ತಿಂಗಳ ಕಾಲ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ ನೀಡಿ ರಾಜ್ಯ ಸರ್ಕಾರ 2021 ಆಗಸ್ಟ್ 16 ರಂದು ಆದೇಶಿಸಿತ್ತು. ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು. ಹೋಟೆಲ್‍ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಬೆಸ್ಕಾಂ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಪ್ರಕೃತಿ ವಿಕೋಪದಂತಹ ಸಂದರ್ಭಗಳನ್ನು ಹೊರತು ಪಡಿಸಿ ಹೋಟೆಲ್‍ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು ಎಂದು ತಿಳಿಸಿದೆ.

ಕುಂಬಳಗೋಡು ಪ್ರದೇಶದಲ್ಲಿ ಉಂಟಾಗಿರುವ ವಿದ್ಯುತ್ ವ್ಯತ್ಯಾಯದ ಕುರಿತು ಹೋಟೆಲ್ ಸಂಘದ ಪದಾಧಿಕಾರಿಗಳು ಬೆಸ್ಕಾಂ ಗಮನಕ್ಕೆ ತಂದಿದ್ದು, ವಿಪರೀತ ಗಾಳಿ ಮಳೆಗೆ 300 ಕ್ಕೂ ಹೆಚ್ಚು ಮರಗಳು ಮತ್ತು 150 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದ್ದರಿಂದ ಕುಂಬಳಗೋಡು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಾಯ ಉಂಟಾಗಿತ್ತು. ದುರಸ್ಥಿಗೊಂಡಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಆ ಪ್ರದೇಶದಲ್ಲಿನ ವಿದ್ಯುತ್ ವ್ಯತ್ಯಾಯವನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕುಂಬಳಗೋಡು ಪ್ರದೇಶದಲ್ಲಿ ಈಗಿರುವ ಟ್ರಾನ್ಸ್ ಫಾರ್ಮರ್ ಮೇಲ್ದರ್ಜೆಗೆ ಏರಿಸಲು ಕೆಪಿಟಿಸಿಎಲ್ ಕಾರ್ಯಪ್ರವರ್ತವಾಗಿತ್ತು. ಈ ಕೆಲಸ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಸ್ಕಾಂ ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದೆ. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬೆಸ್ಕಾಂ ಗಮನಕ್ಕೆ ತಂದರೆ, ಅದರ ಆದ್ಯತೆ ಮೇರೆಗೆ ಸರಿಪಡಿಸಲಾಗುವುದು ಎಂದರು. ಇದನ್ನೂ ಓದಿ: ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ 

ಎಫ್ ಕೆಸಿಸಿಐ ಅಧ್ಯಕ್ಷ ಐ.ಎಸ್.ಪ್ರಸಾದ್ ಮತ್ತು ಹೋಟೆಲ್ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *