ಮಂಡ್ಯ: ಮನಸ್ಸಿದ್ದರೆ ಮಾರ್ಗ. ಈ ಮಾತನ್ನ ಹಲವರು ಸಾಬೀತು ಮಾಡಿರೋ ಬಗ್ಗೆ ಇದೇ ಪಬ್ಲಿಕ್ ಹೀರೋದಲ್ಲಿ ತೋರಿಸಿದ್ದೀವಿ. ಅದೇ ರೀತಿ ಇದೀಗ ಮಂಡ್ಯದ ಬಸವರಾಜು ತಮಗಿದ್ದ ದಿವ್ಯಾಂಗ ಸಮಸ್ಯೆಯನ್ನ ಮೆಟ್ಟಿ ಸ್ವಾವಲಂಬಿಗಳಾಗಿದ್ದಾರೆ.
ತನ್ನ ಎರಡು ಕಾಲುಗಳೂ ಊನ ಆಗಿದ್ರೂ, ಸರಾಗವಾಗಿ ಆಟೋ ಓಡಿಸ್ತಿರೋ ಇವರ ಹೆಸರು ಬಸವರಾಜು. ಮಂಡ್ಯದ ಮಳವಳ್ಳಿ ತಾಲೂಕಿನ ಬಾಣಸಮುದ್ರ ಗ್ರಾಮದವರು. ಕೂಲಿ ಕುಟುಂಬವಾದ ತಗಡಯ್ಯ-ದೊಡ್ಡಮ್ಮ ದಂಪತಿ ಪುತ್ರ ಬಸವರಾಜ್‍ಗೆ ಹುಟ್ಟಿನಿಂದಲೇ ಈ ಸಮಸ್ಯೆ ಇತ್ತು. ಹಾಗೆಂದ ತಲೆಮೇಲೆ ಕೈಯಿಟ್ಟು ಕೂರದೇ ಸೆಟೆದು ನಿಂತು ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ.
ಮೊದಲಿಗೆ ಕೆಲಸ ಹುಡುಕಿಕೊಂಡು ಹೋದಾಗ, ವಿಕಲಚೇತನ ಅಂತ ನಿರಾಕರಿಸಿದವರೇ ಹೆಚ್ಚು. ಆದ್ರೂ ಪುಣ್ಯಾತ್ಮರೊಬ್ರು ಸೈಕಲ್ ಶಾಪ್‍ನಲ್ಲಿ ಕೆಲಸ ಕೊಟ್ರು. ಅಲ್ಲಿ ಪಂಚರ್ ಹಾಕೋದನ್ನ ಕಲಿತು ನಂತ್ರ ಒಂದಷ್ಟು ಸಣ್ಣಪುಟ್ಟ ಮೆಕ್ಯಾನಿಕ್ ಕೆಲಸ ಕಲಿತ್ರು. ಬಳಿಕ ತಾನೇ ಪಂಕ್ಚರ್ ಶಾಪ್ ಓಪನ್ ಮಾಡಿ ಬದುಕು ಕಟ್ಟಿಕೊಂಡ್ರು.
ಹೀಗೆ ಪಂಚರ್ ಹಾಕಿದ ದುಡ್ಡನ್ನ ಸಂಗ್ರಹಿಸಿ ಆಟೋ ಖರೀದಿಸಿದ್ರು. ನಂತ್ರ ಕಾರ್ಯಕ್ರಮಗಳಿಗೆ ಲೈಟಿಂಗ್ಸ್, ಮೈಕ್ ಹಾಕಲು ಬಂಡವಾಳ ಹೂಡಿದ್ರು. ಅವುಗಳನ್ನು ಸಾಗಿಸಲು ಲಗೇಜ್ ಆಟೋ ಖರೀದಿಸಿದ್ರು. ಮದುವೆ, ಶುಭ ಸಮಾರಂಭಗಳಿಗೆ ನೇಮ್ ಬೋರ್ಡ್ ಬರೆಯಲಾರಂಭಿಸಿದ್ರು. ಹೀಗೆಲ್ಲಾ ಮಾಡ್ತಿರೋ ಬಸವರಾಜ್ ಈಗ ನಾಲ್ಕೈದು ಹುಡುಗರಿಗೆ ಕೆಲಸ ಕೊಟ್ಟಿದ್ದಾರೆ. ಅಲ್ಲದೆ ಆಟೋದಲ್ಲಿ ಅಂಗವಿಕಲರಿಗೆ ಉಚಿತ ಪ್ರಯಾಣದ ಸೇವೆಕೊಡ್ತಿದ್ದಾರೆ.
ಒಟ್ಟಿನಲ್ಲಿ ಅಂಗವಿಕಲತೆ ಶಾಪವಲ್ಲ ಅಂತ ತೋರಿಸಿರೋ ಬಸವರಾಜ್, ತನ್ನಂತೆ ವಿಕಲಚೇತನಳನ್ನ ಮದುವೆಯಾಗಿದ್ದು ಗಂಡು ಮಗು ಇದೆ.
https://www.youtube.com/watch?v=ws7iJ69fSUo








