ನದಿ ಜೋಡಣೆ, ಕರ್ನಾಟಕಕ್ಕೆ ಸಮರ್ಪಕ ಪಾಲು ದೊರೆಯಬೇಕು: ಬಸವರಾಜ ಬೊಮ್ಮಾಯಿ

Public TV
2 Min Read

ನವದೆಹಲಿ: ನದಿ ಜೋಡಣೆ ವಿಚಾರದಲ್ಲಿ ಕರ್ನಾಟಕದ ಸಮರ್ಪಕ ಪಾಲು ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನದಿ ಪಾತ್ರದಲ್ಲಿ ಉತ್ಪಾದನೆಯಾಗುವ ನೀರು, ನಮ್ಮ ಅಗತ್ಯ ಹಾಗೂ ಈಕ್ವಿಟಿ ಆಧರಿಸಿ ಪಾಲು ನಿರ್ಧಾರವಾಗಬೇಕೆನ್ನುವುದು ನಮ್ಮ ನಿಲುವು. ಡಿಪಿಆರ್ ಅಂತಿಮಗೊಳಿಸುವ ಮುನ್ನ ಎಲ್ಲಾ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕೂಡ ಹೇಳಲಾಗಿದೆ. ಕರ್ನಾಟಕ್ಕೆ ನ್ಯಾಯ ಸಮ್ಮತವಾದ ಪಾಲನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜೀವನದಿಗಳಾಗಿರುವ ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಪ್ರಶ್ನೆಯಾಗಿರುವುದರಿಂದ ಈ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು.

ದೆಹಲಿಯಲ್ಲಿ ಇಂದು ಸಂಸದರ ಸಭೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿರುವ ಹಲವಾರು ಯೋಜನೆಗಳು ಚರ್ಚೆಯಾಗಲಿವೆ. ಕೇಂದ್ರ ಬಜೆಟ್ ಆಧರಿಸಿ ರಾಜ್ಯ ಬಜೆಟ್‍ನ್ನು ಪೂರಕವಾಗಿ ನಾವೆಷ್ಟು ಅಂದಾಜುಗಳನ್ನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲಾಗುವುದು. ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ಪಾಲಾರ್, ಪೆನ್ನಾರ್, ನದಿ ಜೋಡಣೆ ಹಿಮಾಲಯ ಹಾಗೂ ಪೆನೆಸ್ಯುಲಾರ್ ಭಾಗದ ಪ್ರಮುಖ ನದಿಜೋಡಣೆ ಯೋಜನೆಗಳು. ನಮ್ಮ ನಿಲುವಿನ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂಧನ ಸಚಿವರು, ರಕ್ಷಣ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಭೇಟಿಯಾಗಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ನಾಳೆಯೂ ದೆಹಲಿಯಲ್ಲಿಯೇ ಇರುವುದಾಗಿ ತಿಳಿಸಿದ ಅವರು ಜೆ.ಪಿ.ನಡ್ಡಾ ಹಾಗೂ ಅಮಿತ್ ಷಾ ಅವರನ್ನೂ ಭೇಟಿಯಾಗುವ ಸಾಧ್ಯತೆಗಳಿವೆ. ಕೇಂದ್ರದ ನಾಯಕರು ಸಮಯ ನೀಡಿದಾಗ ಸಂಪುಟ ರಚನೆಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬರಲಿವೆ ಎಂದಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

ವಸ್ತ್ರ ಸಂಹಿತೆ ಸುತ್ತೋಲೆ ಪಾಲಿಸಿ: ಶಾಲಾ ಕಾಲೇಜುಗಳಲ್ಲಿ ಯಾವ ರೀತಿಯ ವಸ್ತ್ರಸಂಹಿತೆ ಇರಬೇಕೆನ್ನುವುದು ಸಂವಿಧಾನ ಹೇಳಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳಲ್ಲಿ ಹಾಗೂ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಸಹ ಸ್ಪಷ್ಟವಾಗಿ ಹೇಳಿದೆ. ಸರ್ಕಾರವೂ ಈಗಾಗಲೇ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮುಖ್ಯ. ಪರೀಕ್ಷೆಯೂ ಹತ್ತಿರ ಬರುತ್ತಿರುವುದರಿಂದ ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಪರಿಪಾಲಿಸಬೇಕು. ಉಚ್ಛನ್ಯಾಯಾಲಯದಲ್ಲಿಯೂ ಈ ಬಗ್ಗೆ ರಿಟ್ ಅರ್ಜಿ ಹಾಕಲಾಗದ್ದು, ಅಲ್ಲಿಯೂ ಚರ್ಚೆಯಾಗಿ ತೀರ್ಮಾನವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಂತಿಯನ್ನೂ ಕಾಪಾಡಬೇಕು. ಯಾರೂ ಶಾಂತಿಯನ್ನು ಕದಡುವ ತೀರ್ಮಾನ ಮಾಡಬಾರದು. ಸುತ್ತೋಲೆಯನ್ನು ಪರಿಪಾಲಿಸಬೇಕು. ಇಂಥ ಪ್ರಕರಣಗಳು ಎಲ್ಲಾ ರಾಜ್ಯಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿ ತೀರ್ಮಾನಗಳಾಗಿವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *