ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ – ಹಾವೇರಿ ನೈತಿಕ ಪೊಲೀಸ್‌ಗಿರಿ ತನಿಖೆಗೆ ವಿಶೇಷ ತಂಡ ರಚಿಸಿ: ಬೊಮ್ಮಾಯಿ ಆಗ್ರಹ

Public TV
2 Min Read

ಬೆಂಗಳೂರು: ಹಾವೇರಿಯ ನಡೆದ ನೈತಿಕ ಪೊಲೀಸ್‌ಗಿರಿ ಬಗ್ಗೆ ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಾಗ ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿ ಪ್ರಕರಣದ ಕುರಿತು ಸಿಎಂ ಮಾತನಾಡುತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೆ (Sexual Assault) ಒಳಗಾದವಳು ಅಲ್ಪಸಂಖ್ಯಾತ ಮಹಿಳೆ ಅವಳಿಗೂ ರಕ್ಷಣೆ ನೀಡದೇ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆರಂಭದಲ್ಲಿ ಪೊಲೀಸರು ಅದನ್ನು ತಳ್ಳಿ ಹಾಕುವ ಪ್ರಯತ್ನ ‌ನಡೆಸಿದರು. ಆರೋಪಿಗಳಿಗೆ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದರು. ಯುವತಿ ಧೈರ್ಯವಾಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ, ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಚಾಂಪಿಯನ್. ಇಲ್ಲಿ ಅಲ್ಪಸಂಖ್ಯಾತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ರೂಮಿನಲ್ಲಿ ಮಹಿಳೆ, ಪುರುಷನಿಗೆ ಥಳಿತ – ಹಾವೇರಿಯಲ್ಲಿ ನೈತಿಕ ಪೊಲೀಸ್‌ಗಿರಿ, ಇಬ್ಬರು ಅರೆಸ್ಟ್

ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು 30% ರಷ್ಟು ಹೆಚ್ಚಾಗಿವೆ. ಈ ಗ್ಯಾಂಗ್ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದು, ಮುಚ್ಚಿ ಹಾಕಲಾಗಿದೆ. ಅದನ್ನೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಥೀಮ್‌ನ ಬನಾರಸಿ ಸೀರೆಗಳಿಗೆ ಹೊರ ದೇಶಗಳಲ್ಲೂ‌ ಇದೆ ಬೇಡಿಕೆ- ವಿಶೇಷತೆ ಏನು..?

ಕಾನೂನು ಬಾಹಿರ ಹುದ್ದೆ: ರಾಜ್ಯದಲ್ಲಿ ದೊಡ್ಡ ಮಟ್ಟದ ಬರ ಉಂಟಾಗಿದೆ. ಸಿಎಂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಿಎಂ ಆರ್ಥಿಕ ಪರಿಸ್ಥಿತಿ ಸರಿಯಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ಬರ ಪರಿಹಾರ, ಶಾಲಾ ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದರು. ಕಲ್ಯಾಣ ಕರ್ನಾಟಕ ಭಾಗಕ್ಕೆ 3,000 ಕೋಟಿ ರೂ. ಬಿಡುಗಡೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಅದನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾರ್ಯಕರ್ತರನ್ನ ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರನ್ನು ಮರೆತಿದ್ದರು. ಅವರು ಆಕ್ರೋಶಗೊಂಡಿದ್ದರಿಂದ ಸಮಾಧಾನಪಡಿಸಲು ಕಾನೂನು ಬಾಹಿರವಾಗಿ ಸಂವಿಧಾನ ಬಾಹಿರ ಹುದ್ದೆ ನೀಡುತ್ತಿದ್ದಾರೆ, ಭ್ರಷ್ಟಾಚಾರವನ್ನ ಬಹಿರಂಗವಾಗಿ ಮಾಡುತ್ತಿದ್ದಾರೆ. ಗ್ಯಾರಂಟಿ ಉಸ್ತುವಾರಿಗೆ ಕ್ಯಾಬಿನೆಟ್ ರ‍್ಯಾಂಕ್‌ ನೀಡುವುದು ಸಂವಿಧಾನ ಬಾಹಿರ ಇದನ್ನು ಸಂಪುಟ ಸಚಿವರು ಗಂಭೀರವಾಗಿ ಯೋಚಿಸಬೇಕು. ಸಂಪುಟದ ಮರ್ಯಾದೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇನ್ನೂ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ನಡೆದ ಸಭೆಯ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಬಹುತೇಕ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆಕಾಂಕ್ಷಿಗಳ ಬಗ್ಗೆ ಕೇಂದ್ರ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ – 2 ಗಂಟೆ ಪ್ರಯಾಣ 20 ನಿಮಿಷಕ್ಕೆ ಇಳಿಕೆ

Share This Article