ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಬೊಮ್ಮಾಯಿ

Public TV
5 Min Read

ಹಾವೇರಿ: ಪ್ರಜಾಪಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಯಾಗಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ರೀತಿಯಲ್ಲಿ ಸಹಕಾರ ರಂಗ ಸರ್ಕಾರದ ಮೇಲೆ ಹಿಡಿತ ಸಾಧಿಸುವಂತಾಗಬೇಕು. ಕೆಎಂಎಫ್ ಮಾದರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

ಹಾವೇರಿಯಲ್ಲಿ (Haveri) ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ, ಬೆಂಗಳೂರು ಹಾಗೂ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಆಡಳಿತ ಕಛೇರಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು. ವಿಶ್ವದಲ್ಲಿ ಎರಡು ವ್ಯವಸ್ಥೆಗಳ ನಡುವೆ ಸದಾ ಸಂಘರ್ಷ ಇದೆ. ಕೆಲವು ದೇಶಗಳು ಕಮ್ಯುನಿಸ್ಟ್ ದೇಶಗಳಿವೆ. ಇನ್ನು ಕೆಲವು ಫೆಡರಲ್ ದೇಶಗಳಿವೆ. ಈ ಎರಡು ವಿಚಾರಧಾರೆಯ ಆಡಳಿತ ವಿಶ್ವದಲ್ಲಿದೆ. ಬಂಡವಾಳ ಶಾಹಿಗಳಿಗೆ ಮತ್ತು ಕಮ್ಯುನಿಸ್ಟ್ಗಳಿಗೆ ಪರ್ಯಾಯವಾಗಿರುವ ವ್ಯವಸ್ಥೆ ಸಹಕಾರ ತತ್ವ, ಕೋ ಆಪರೇಟಿವ್ ವ್ಯವಸ್ಥೆ ಜನರಿಂದ ಜನರಿಗೋಸ್ಕರ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವಸ್ತುಗಳ ತೆರಿಗೆ ಭಾರೀ ಇಳಿಕೆ ಸಾಧ್ಯತೆ – ಜಿಎಸ್‌ಟಿಯಲ್ಲಿ ಇರಲಿದೆ ಎರಡೇ ಸ್ಲ್ಯಾಬ್‌!

ಸಹಕಾರಿ ಸಂಘ ಯಶಸ್ವಿಯಾಗಲು ಎರಡು ಸಾಮಾನ್ಯ ತತ್ವ ಮುಖ್ಯ. ಒಂದು ಹಾಲು ಉತ್ಪಾದಕ, ಸಾಮಾನ್ಯ ನೇಕಾರ, ಸ್ವಾಭಿಮಾನದ ಮೂಲಕ ಸಹಕಾರ ರಂಗ ಕಟ್ಟುವ ಮೂಲಕ ಹೆಚ್ಚು ಬಂಡವಾಳ ಇಲ್ಲದೇ ಸಂಘ ಕಟ್ಟಬಹುದು. ಇನ್ನೊಂದು ಪ್ರಜಾಪಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಯಾಗಿದೆ. ಸಹಕಾರ ಕ್ಷೇತ್ರ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ. ಅಲ್ಲಿ ಸಹಕಾರ ರಂಗ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತದೆ. ಇಲ್ಲಿ ಸರ್ಕಾರ ಸಹಕಾರ ರಂಗದ ಮೇಲೆ ಹಿಡಿತ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

ನಾವೂ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ರೈತರ ಕೈಯಲ್ಲಿ ಇಟ್ಟುಕೊಳ್ಳಬೇಕು. ಭಾರತದ ಗೃಹ ಸಚಿವರು ಹೊಸದಾಗಿ ಆಗಿರುವ ಸಹಕಾರ ಇಲಾಖೆಯ ಸಚಿವರು, ಅಮಿತ್ ಶಾ ಅವರು ಇಷ್ಟು ವರ್ಷ ರಾಜಕಾರಣದಲ್ಲಿದ್ದಾರೆ. ಆದರೆ, ಅವರು ತಮ್ಮೂರಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಅಂದರೆ ಎಷ್ಟು ಮಹತ್ವದ್ದಾಗಿದೆ ಎಂದರ್ಥ. ಸಹಕಾರ ರಂಗದಲ್ಲಿ ಹಾಲು ಉತ್ಪಾದನೆಯ ಕ್ಷೀರ ಕ್ಷೇತ್ರ ಯಶಸ್ವಿಯಾಗಿದೆ. ಒಂದು ವ್ಯವಸ್ಥೆಯ ಮೂಲಕ ಆರ್ಥಿಕ ಚಟುವಟಿಕೆ, ವ್ಯಾಪಾರ, ವ್ಯವಹಾರ, ಆಧುನಿಕ ತಂತಜ್ಞಾನ ಬಳಸಿಕೊಂಡು ಯಶಸ್ವಿಯಾಗಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಹಾಲು ಒಕ್ಕೂಟಕ್ಕೆ ಖಾಸಗಿಯವರಿಂದ ಬಹಳಷ್ಟು ಸ್ಪರ್ಧೆ ಇದೆ. ನಮ್ಮ ರೈತರು ಒಗ್ಗಟ್ಟಾಗಿ ಹಾವೇರಿ ಒಕ್ಕೂಟ ನನ್ನದು ಎಂದು ತೀರ್ಮಾನ ಮಾಡಿದರೆ ಹಾಲು ಒಕ್ಕೂಟ ಗಟ್ಟಿಯಾಗಿ ಬೆಳೆಯುತ್ತದೆ. ಇದು ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಬಹಳ ಉಪಯುಕ್ತವಾಗಿದೆ. ಕೇವಲ ಒಕ್ಕಲುತನ ಮಾಡಿದರೆ ಉದ್ಧಾರವಾಗಲು ಸಾಧ್ಯವಿಲ್ಲ. ಅದರ ಜೊತೆಗೆ ಉಪಕಸುಬು ಮಾಡುವ ಮೂಲಕ ಸಮಗ್ರ ಕೃಷಿ ಮಾಡಿದರೆ ರೈತರಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಲು ಸುಲಭವಾಗಿ ಸಾಧ್ಯವಾಗುತ್ತದೆ. ಇದನ್ನು ಸರ್ಕಾರ ಮನಗಂಡು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಧರ್ಮಾಧಿಕಾರಿಗಳ ವಿರುದ್ಧ ಅವಹೇಳನ ಮಾಡಲಾಗುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್‌

ನಾನು ಗೃಹ ಸಚಿವನಾಗಿದ್ದಾಗ ಹಾಗೂ ಸಿಎಂ ಆಗಿದ್ದಾಗ ಹಾಲು ಉತ್ಪಾದಕರ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಪಯತ್ನ ಮಾಡಿದ್ದೆವು. ಆದರೆ, ಆರ್‌ಬಿಐ ಅನುಮತಿ ಕೊಡಲಿಲ್ಲ. ಸಹಕಾರ ರಂಗದಲ್ಲಿ ರೆಸಲ್ಯೂಷನ್ ಮಾಡಿದರೆ ರಾಜ್ಯ ಮಟ್ಟದಲ್ಲಿ ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಮಾಡಲು ಸಾಧ್ಯವಿದೆ. 50 ವರ್ಷದಲ್ಲಿ ನಮ್ಮ ದುಡ್ಡಿನಲ್ಲಿಯೇ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು. ಲಕ್ಷಾಂತರ ಹಾಲು ಉತ್ಪಾದಕರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಧಾರವಾಡ ಹಾಲು ಒಕ್ಕೂಟದಿಂದ ಬೇರ್ಪಡಿಸಲು ಒಗ್ಗಟ್ಟಾಗಿ ಹೋಗಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಿಕೊಂಡೆವು. ಧಾರವಾಡ ಮತ್ತು ಹಾವೇರಿ ನಿರ್ದೇಶಕರ ಮಂಡಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಹಾಲು ಉತ್ಪಾದನೆ ಜೊತೆಗೆ ಇತರ ಉತ್ಪನ್ನ ಮಾಡಿದರೆ ಮಾದರಿ ಹಾಲು ಒಕ್ಕೂಟ ಮಾಡಲು ಸಾಧ್ಯ. ಪ್ರಸ್ತುತ 1 ಲಕ್ಷ 20 ಸಾವಿರದಿಂದ 1 ಲಕ್ಷ 50 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರು ಮನಸು ಮಾಡಿದರೆ 3 ಲಕ್ಷ ಲೀ. ಹಾಲು ಉತ್ಪಾದನೆ ಮಾಡಬಹುದು. ಮೆಗಾ ಡೈರಿಗೆ ನಾನು 70 ಕೋಟಿ ರೂ. ಕೊಟ್ಟಿದ್ದೇನೆ. ಆದಷ್ಟು ಬೇಗ ಮೆಗಾ ಡೈರಿ ಕಾರ್ಯ ಆರಂಭಿಸಬೇಕು. ಹಾವೇರಿಗೆ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಸಿಎಂ ಅವರನ್ನು ಕರೆಸಲು ತೀರ್ಮಾನಿಸಿದ್ದೇವೆ. ಅದೇ ಸಂದರ್ಭದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಲು ಪ್ರಯತ್ನ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಇಂದು ದಣಿದಿದ್ದಾರೆ, ನಾಳೆ ನಿವೃತ್ತಿ ಆಗ್ತಾರೆ – ಜೈರಾಮ್‌ ರಮೇಶ್‌

ಈಗಿನ ನಿರ್ದೇಶಕ ಮಂಡಳಿಯವರು ಒಕ್ಕೂಟವನ್ನು ಎತ್ತಿ ಹಿಡಿಯಬೇಕು. ರೈತರಿಗೆ ಅನುಕೂಲ ಮಾಡಬೇಕು ಎನ್ನುವ ಕಳಕಳಿ ಇದೆ. ನಾವು ನಿಮ್ಮ ಜೊತೆಗೆ ಇದ್ದೇವೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ಹಿಂದಿನ ನಿರ್ದೇಶಕ ಮಂಡಳಿಯೂ ಬಹಳಷ್ಟು ಶ್ರಮವಹಿಸಿದೆ. ಅವರಿಗೂ ಕೂಡ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಾರಿ ಸವಾಲು ರೂಪದಲ್ಲಿದೆ. ಧಾರವಾಡ ಹಾಲು ಒಕ್ಕೂಟಕ್ಕಿಂತ ಎರಡು ಪಟ್ಟು ಹಾಲು ಉತ್ಪಾದನೆ ಹಾವೇರಿ ಒಕ್ಕೂಟದಿಂದ ಮಾಡೋಣ. ಈಗ ಕೆಎಂಎಫ್‌ನವರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಪ್ಯಾಕೇಜಿಂಗ್ ಯುನಿಟ್ ಪಾರಂಭ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಹಣ ಆದಷ್ಟು ಬೇಗ ಬರುವಂತೆ ಸಚಿವರು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

ಆಡಳಿತ ಮಂಡಳಿ ಕಚೇರಿ ಪಾರಂಭವಾಗಿದೆ. ಒಳ್ಳೆಯ ವ್ಯವಸ್ಥೆ ಇದೆ. ಅದರಲ್ಲಿ ಕುಳಿತು ಹೇಗೆ ಆಡಳಿತ ಮಾಡಬೇಕು ಎನ್ನುವುದು ಮುಖ್ಯ. ಪ್ರತೀ ನಿರ್ಣಯ ಬಡ ರೈತನಿಗೆ ಅನುಕೂಲವಾಗಬೇಕು. ಹಾಲು ಮಾರುವವ ಎಷ್ಟೇ ಪ್ರಾಮಾಣಿಕವಾಗಿದ್ದರೂ ಹಾಲಿನಲ್ಲಿ ನೀರು ಹಾಕಿದ್ದೀಯಾ ಎಂದು ಕೇಳುತ್ತಾರೆ. ಆಲ್ಕೋಹಾಲಿನವರು ಹಾಗೇ ಕೊಟ್ಟರೂ ನೀರು ಹಾಕಿಕೊಂಡು ಕುಡಿಯುತ್ತಾರೆ. ಹಾವೇರಿಯಲ್ಲಿ ಮೆಗಾ ಡೈರಿ ಉದ್ಘಾಟನೆಯಾದ ದಿನ ಅತ್ಯಂತ ಸಂತೋಷವಾಗಲಿದೆ. ರೈತರ ಮುಖದಲ್ಲಿ ನಗು ಇರಬೇಕು. ರೈತ ರೇಷ್ಮೆ ಅಂಗಿ, ರೇಷ್ಮೆ ಧೋತರಾ ತೊಟ್ಟಿರಬೇಕು. ಕಾಲಾಗ ಝುರಕಿ ಚಪ್ಪಲಿ ಹಾಕಿರಬೇಕು. ರೈತ ನಕ್ಕೊಂತ ಇರಬೇಕು. ಆಗ ನಮ್ಮ ದೇಶ ಉದ್ಧಾರ ಆಗಿದೆ ಅಂತ ಅರ್ಥ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಶಾಸಕ ಬಸವರಾಜ್ ಶಿವಣ್ಣನವರ್, ಶ್ರೀನಿವಾಸ್ ಮಾನೆ, ಪ್ರಕಾಶ್ ಕೋಳಿವಾಡ, ಮಾಜಿ ಶಾಸಕ ಎಸ್.ಆರ್ ಪಾಟೀಲ್, ವೀರುಪಾಕ್ಷಪ್ಪ ಬಳ್ಳಾರಿ, ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್, ಉಪಾಧ್ಯಕ್ಷ ಉಜ್ಜನಗೌಡ ಮಾವೀನತೋಪ ಸೇರಿ ಹಲವರು ಉಪಸ್ಥಿತರಿದ್ದರು.

Share This Article