ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವ ವಿಚಾರಕ್ಕೆ ದೆಹಲಿ ಭೇಟಿ: ಬಸವರಾಜ್ ಬೊಮ್ಮಾಯಿ

Public TV
1 Min Read

ನವದೆಹಲಿ: ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿದ್ದೇನೆ. ಡಿಸೆಂಬರ್ 6 ರಂದು ಮಹತ್ವದ ಸಭೆ ನಡೆಯಲಿದ್ದು, ಟ್ರಿಬ್ಯುನಲ್ ಆದೇಶದ ಪ್ರಕಾರ ನೋಟಿಫಿಕೇಷನ್ ಹೊರಡಿಸುವ ಬಗ್ಗೆಯೂ ಮನವಿ ಮಾಡಿದ್ದೇನೆ ಎಂದರು.

ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ್ ಸಿಂಗ್ ಶೇಖಾವತ್ ಅವರೊಂದಿಗೂ ಚರ್ಚೆ ನಡೆಸಿದ್ದು, ಗೋದಾವರಿ ಕೃಷ್ಣಾ ಮಹಾನದಿ ಜೋಡಣೆ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ನಮ್ಮ ಗಮನಕ್ಕೆ ತರದೇ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದೇನೆಂದು ತಿಳಿಸಿದರು. ಇದನ್ನೂ ಓದಿ: ಪೊಲೀಸರ ತನಿಖೆ ನಂತರ ಶಾಸಕರ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ: ಡಿ.ಕೆ ಸುರೇಶ್

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ಅವರನ್ನು ಭೇಟಿಯಾಗಿ ಕೊರೊನಾ ನಿರ್ವಹಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಸೂಚಿಸಿದ್ದಾರೆ. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಜ್ಞರ ಜೊತೆಯೂ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ

ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ. ಅವರು ಯಾವ ಸಂದರ್ಭಕ್ಕೆ ಏನು ಹೇಳಿದ್ದಾರೋ ಗೊತ್ತಿಲ್ಲ. ರಮೇಶ್ ಅವರನ್ನು ಕರೆದು ಮಾತನಾಡುತ್ತೇನೆ ಎಂದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ಬಗ್ಗೆ ಮಾತನಾಡಿ, ರಾಜನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ರಿಜಿಸ್ಟರ್ ಆದ ಮೇಲೆ ತನಿಖೆ ನಡೆಯಲಿದೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *