“ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ

Public TV
3 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಅಭಿವೃದ್ದಿಗೊಂಡಿರುವ ಕಾಶಿಗೆ ಹೆಚ್ಚಿನ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಡಿಬಿಟಿ ಮೂಲಕ ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿ ಹಾಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ: ಮಂತ್ರಾಲಯ ಶ್ರೀಗಳಿಂದ ನದಿ ಪೂಜೆ

ಇತ್ತೀಚೆಗೆ ಕಾಶಿಯನ್ನು ಮೋದಿಯವರು ನವೀಕರಣ ಮಾಡಿದ್ದಾರೆ. ಹಿಂದೆ ಕಾಶಿಗೆ ಹೋದರೆ ಅಲ್ಲಿನ ಅವ್ಯವಸ್ಥೆಯಿಂದ ಬೇಸರ ಉಂಟಾಗುತ್ತಿತ್ತು. ಆದರೆ ಈಗ ನೂರಕ್ಕೆ ನೂರು ಬದಲಾವಣೆ ಆಗಿದೆ. 23 ಘಾಟ್ ಗಳನ್ನು ಸ್ವಚ್ಛಗೊಳಿಸಿ ಬದಲಾವಣೆ ಮಾಡಲಾಗಿದೆ. ದೇವಸ್ಥಾನದ ಆವರಣ ಸ್ವಚ್ಛಗೊಳಿಸಿ ಭಕ್ತಿ ಮೂಡುವಂತೆ ಮಾಡಿದ್ದಾರೆ. ಕಾಲಕಾಲದಿಂದ ಕಾಶಿಗೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಕಾಶಿಯಾತ್ರಿಕರಿಗೆ ಸಹಾಯ ಮಾಡಬೇಕು ಅಂತ ಜೊಲ್ಲೆಯವರು ಕಾರ್ಯಕ್ರಮ ರೂಪಿಸಲು ಮುಂದಾದರು. ನೇರ ಹಣ ವರ್ಗಾವಣೆ ಮಾಡುವ ಡಿಬಿಟಿ ಸಿಸ್ಟಮ್ ಜಾರಿಯಾಗಿದೆ. ಒಳ್ಳೆ ಕೆಲಸ ಮಾಡಿದ್ದಾರೆ. ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಎಂಡ್ ಟು ಎಂಡ್ ಬಹಳ ಒಳ್ಳೆಯ ಕೆಲಸ ಮಾಡಿದ್ದು, ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಶಿಗೆ ಸಂದರ್ಶಿಸಲಿ ಎಂದರು.

ದಿವ್ಯ ಕಾಶಿ – ಭವ್ಯ ಕಾಶಿಯಾಗಿ ಅನಾವರಣಗೊಂಡಿರುವ ಕಾಶಿಯನ್ನ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಇದಕ್ಕಾಗಿ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಆಸಕ್ತಿಯ ಈ ಯೋಜನೆಯನ್ನ ಸರಳಗೊಳಿಸುವ ಮೂಲಕ ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲ್‌ನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ತಮ್ಮ ನೋಂದಣಿ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ವೆಬ್‌ಪೋರ್ಟಲ್‌ ಮೂಲಕ ಸಲ್ಲಿಸಬಹುದು ಎಂದು ತಿಳಿಸಿದರು.

ಇದೇ ವೇಳೆ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಜರಾಯಿ ಇಲಾಖೆಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ದಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಬಲ ತುಂಬಿದ್ದಾರೆ. ಕಳೆದ 10 ವರ್ಷಗಳಿಗೆ ಹೋಲಿಸಿದಲ್ಲಿ ಅತಿಹೆಚ್ಚು ಅನುದಾನ ಈ ಆರ್ಥಿಕ ವರ್ಷದಲ್ಲಿ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 693 ಕೋಟಿ ರೂಪಾಯಿಗಳಷ್ಟು ಬೃಹತ್‌ ಅನುದಾನ ನೀಡಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ಮಾಡಬೇಕು ಎನ್ನುವುದು ಬಹಳಷ್ಟು ಜನರ ಅಭಿಲಾಷೆಯಾಗಿರುತ್ತದೆ. ಅದಕ್ಕೆ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ನನ್ನ ಬಹಳ ದಿನದ ಆಶಯವಾಗಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಘೋಷಣೆ ಮಾಡಿದರು. ಅಲ್ಲದೇ ಸೂಕ್ತ ಅನುದಾನವನ್ನೂ ಒದಗಿಸಿದ್ದಾರೆ. ಹಾಗೆಯೇ ಭಾರತ್‌ ಗೌರವ್‌ ಯೋಜನೆ ಪ್ರಾರಂಭಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ: ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

ಏಪ್ರಿಲ್‌ 1, 2022 ರಿಂದ ಜುಲೈ 20, 2022 ರ ವರೆಗೆ ಕಾಶಿ ಯಾತ್ರೆಯನ್ನು ಕೈಗೊಂಡಿರುವ ಜನರು ಆಫ್‌ಲೈನ್‌ ಅರ್ಜಿಗಳನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸುವ ಮೂಲಕ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇದುವರೆಗೂ 500 ಕ್ಕೂ ಹೆಚ್ಚು ಆಫ್‌ಲೈನ್‌ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ಮುಂದೆ ಕಾಶಿ ಯಾತ್ರೆಯನ್ನು ಕೈಗೊಂಡು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ಸಂಬಂಧಿಸಿದ ದಾಖಲಾತಿಗಳನ್ನು ಇಲಾಖೆಯ ವೆಬ್‌ಸೈಟ್‌ https://itms.kar.nic.in/ ಮತ್ತು ಸೇವಾ ಸಿಂಧು ಮೂಲಕ ವೆಬ್‌ ಪೊರ್ಟ್‌ಲ್‌ನಲ್ಲಿ (https://sevasindhu.karnataka.gov.in/) ಅಪ್‌ಲೋಡ್‌ ಮಾಡಬೇಕು. ಈ ರೀತಿಯಾಗಿ ಅಪ್‌ಲೋಡ್‌ ಮಾಡಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರರ ಆಧಾರ್‌ ಲಿಂಕ್‌ ಹೊಂದಿರತಕ್ಕಂತಹ ಬ್ಯಾಂಕ್‌ ಖಾತೆಗೆ 5,000 ರೂ. ಸಹಾಯಧನವನ್ನು ನೇರವಾಗಿ ಡಿಬಿಟಿ ಮೂಲಕ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಾಶಿಯಾತ್ರೆಗೆ ತೆರಳಿದ್ದ 10 ಜನ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಉಮಾಶಂಕರ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *