ಗದಗ-ಯಲವಿಗಿ ರೈಲ್ವೆ ಯೋಜನೆ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಬೊಮ್ಮಾಯಿ ಮನವಿ

Public TV
2 Min Read

ನವದೆಹಲಿ: ಗದಗ ಯಲವಿಗಿ ರೈಲು ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಅವರು, ಗದಗ ಯಲವಿಗಿ ರೈಲ್ವೆ (Gadag – Yalvigi Train) ಯೋಜನೆ ಹಾವೇರಿ ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸುಮಾರು 58 ಕಿ.ಮೀ ಉದ್ದದ ಈ ಯೋಜನೆಗೆ 2017-18ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಯೋಜನೆ ಗದಗ ಹಾವೇರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಷ್ಟೇ ಅಲ್ಲದೇ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುವುದರಿಂದ ಕರ್ನಾಟಕದ ಆರ್ಥಿಕ ಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕಾರ

ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50/50 ಅನುಪಾತದಲ್ಲಿ ಹಣಕಾಸು ಒದಗಿಸುತ್ತಿದ್ದು, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಕರ್ನಾಟಕ ಸರ್ಕಾರ ಈಗಾಗಲೇ ತನ್ನ ಆದೇಶ ನಂ ಐಡಿಡಿ/91/ಎನ್‌ಎಸ್‌ಡಬ್ಲ್ಯು/2022ರಲ್ಲಿ ದಿನಾಂಕ 2022 ಏಪ್ರಿಲ್ 18ರಂದು (ನಾನು ಮುಖ್ಯಮಂತ್ರಿ ಇದ್ದಾಗ) ಯೋಜನೆಯ 50%ರಷ್ಟು ಯೋಜನಾ ವೆಚ್ಚವನ್ನು ಹಾಗೂ ಉಚಿತ ಭೂಮಿ ಕೊಡುವುದಾಗಿ ತಿಳಿಸಲಾಗಿತ್ತು. 2022 ಡಿಸೆಂಬರ್ 17ರಂದು ಪರಿಷ್ಕೃತ ಎಫ್‌ಎಸ್‌ಎಲ್ ಅಂದಾಜು 1.45 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿದ್ದು, ಸರ್ವೆ ಕಾರ್ಯ ಮುಕ್ತಾಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ `ಆಯುಷ್ಮಾನ್ ಭಾರತ್’ ಯೋಜನೆ ಜಾರಿಯಾಗದಿರುವುದಕ್ಕೆ ಲೋಕಸಭೆಯಲ್ಲಿ ಕ್ಯಾ.ಚೌಟ ಕಳವಳ

ಆಗಸ್ಟ್ 2025ರ ಅಂತ್ಯದೊಳಗೆ ಪರಿಷ್ಕೃತ ಡಿಪಿಆರ್ ಸಿದ್ಧವಾಗಲಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಿ ಡಿಪಿಆರ್ ಪಡೆಯುವಂತೆ ನೈರುತ್ಯ ರೈಲ್ವೆ ವಲಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ ಯೋಜನೆಯ ಮೊದಲ ಹಂತದ ಯೋಜನಾ ವೆಚ್ಚ ಸುಮಾರು 650 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಂಡು, ಅದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನೂ ಕೈಗೊಂಡು ಪ್ರಸ್ತುತ 2025-26ನೇ ಆರ್ಥಿಕ ವರ್ಷದಲ್ಲಿ ಯೋಜನೆ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳುತ್ತೀರಿ ಎಂಬ ಭರವಸೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Share This Article