ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

Public TV
1 Min Read

ಬೀದರ್/ಬೆಂಗಳೂರು: ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ ಇತಿಹಾಸ ತಿರುಚಲಾಗಿದೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಆಕ್ರೋಶ ಹೊರಹಾಕಿದೆ. 100ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಇರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಣ್ಣನವರ ಪಠ್ಯವನ್ನು ತಿರುಚಲಾಗಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಬಸವಣ್ಣನವರ ತಿರುಚಿರುವ ಪಠ್ಯವನ್ನು ಸರಿಪಡಿಸದೇ ಹೋದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣ ಕುರಿತಾಗಿ ತಪ್ಪಾಗಿ ಉಲ್ಲೇಖಿಸಲಾಗಿದೆ. ಉಪನಯನ ಆದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ಆದರೆ ಬಸವಣ್ಣನವರು ತಮ್ಮ ಅಕ್ಕ ನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿದ್ದರು. ಇದು ಐತಿಹಾಸಿಕ ಸಂಗತಿ ಎಂದು ಮಠಾಧೀಶರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದರು ಎಂದು ಬರೆಯಲಾಗಿದೆ. ಆದರೆ ಬಸವಣ್ಣನವರೇ ಇಷ್ಟಲಿಂಗದ ಜನಕರು. ಈ ಬಗ್ಗೆ ಅಲ್ಲಮ್ಮಪ್ರಭು ಆದಿಯಾಗಿ ಎಲ್ಲಾ ಶರಣರು ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

ಬಸವಣ್ಣನವರು ವೀರ ಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಪಠ್ಯದಲ್ಲಿ ಸೇರಿಸಿದ್ದಾರೆ. ಇದು ಕೂಡ ತಪ್ಪು. ವಾಸ್ತವದಲ್ಲಿ ವೀರ ಶೈವ, ಶೈವ ಪಂಥದ ಶಾಖೆ. ಅದು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಇತಿಹಾಸ ಹೇಳುತ್ತದೆ. ಸರ್ಕಾರದ ದಾಖಲೆಯಲ್ಲೂ ಹೀಗೆಯೇ ಇದೆ ಎಂದು ಹೇಳಿದ್ದಾರೆ.

ಶೈವರಲ್ಲಿ ವರ್ಣಾಶ್ರಮದ ಆಚರಣೆಯಿದೆ. ಲಿಂಗಾಯತರಲ್ಲಿ ವರ್ಣಾಶ್ರಮ ಪದ್ಧತಿ ಇಲ್ಲ. ಹೀಗಾಗಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂಬುವುದು ಸುಳ್ಳು ಎಂದು ಪತ್ರದಲ್ಲಿ ಉಲ್ಲೇಖಿಸಿ, ಪಠ್ಯ ಪರಿಷ್ಕರಣೆ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *