ಅನ್ನದ ರಾಶಿ ಮೇಲೆ ಭವಿಷ್ಯ ಬರೆದ ಬಸವ – ಇನ್ಮುಂದೆ ನಾಡು ಸುಭಿಕ್ಷ

Public TV
1 Min Read

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಕುಪ್ಪೂರು ಮಠದ ಬಸವ ನಂದೀಶ್ವರ ಭವಿಷ್ಯ ಬರೆದಿದ್ದಾನೆ. ಅನ್ನದ ರಾಶಿ ಮೇಲೆ ಬಲಪಾದ ಸ್ಪರ್ಶಸಿ ಇನ್ಮುಂದೆ ಈ ನಾಡು ಸುಭಿಕ್ಷವಾಗಿರಲಿದೆ ಎಂದು ಭವಿಷ್ಯ ನುಡಿದಿದ್ದಾನೆ. ಈ ಭವಿಷ್ಯದಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.

ಕುಪ್ಪೂರು ಮಠಕ್ಕೆ ತನ್ನದೆ ಆದ ಪೌರಾಣಿಕ ಹಿನ್ನಲೆಯಿದೆ. ಈ ಮಠದಲ್ಲಿ ಸಾಕಲಾಗುವ ನಂದೀಶ್ವರ ಹೆಸರಿನ ಬಸವನಿಗೆ ದೈವಿ ಶಕ್ತಿ ಎಂದು ನಂಬಲಾಗಿದೆ. ಅದರಂತೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯಲ್ಲಿ ನಡೆಯುವ ಜಾತ್ರೋತ್ಸವದ ಅನ್ನ ಸಂತರ್ಪಣೆಯಲ್ಲಿ ಬಸವನ ನಂದೀಶ್ವರ ಭವಿಷ್ಯ ಬರೆಯುತ್ತಾ ಬಂದಿದ್ದಾನೆ.

ಬೃಹತ್ ಅನ್ನದ ರಾಶಿಯ ಮುಂದೆ ಬಸವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅನ್ನದ ರಾಶಿ ಮೇಲೆ ಪಾದ ಸ್ಪರ್ಶ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಾರೆ. ಭಕ್ತರ ಪ್ರಾರ್ಥನೆಗೆ ಓಗೊಟ್ಟು ನಂದೀಶ್ವರ ಪಾದ ಸ್ಪರ್ಶ ಮಾಡುತ್ತಾನೆ. ನಂದೀಶ್ವರನ ಪಾದ ಸ್ಪರ್ಶದಲ್ಲಿ ಒಂದು ವರ್ಷದ ಈ ನಾಡಿನ ಒಳಿತು, ಕೆಡುಕು ಅವಿತಿರುತ್ತದೆ. ಎಡಗಾಲಿಟ್ಟರೆ ಕೆಡುಕಾಗಲಿದೆ. ಬಲಗಾಲಿಟ್ಟರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಅನ್ನದ ರಾಶಿ ಮೇಲೆ ಬಸವ ನಂದೀಶ್ವರ ಬಲಗಾಲಿಟ್ಟಿದ್ದಾನೆ. ಹಾಗಾಗಿ ಈ ವರ್ಷ ನಾಡು ಸುಭಿಕ್ಷವಾಗಿರಲಿದೆ ಎಂಬ ಸಂದೇಶ ರವಾನೆಯಾಗಿದೆ.

ಸಹಸ್ರಾರು ಭಕ್ತಾದಿಗಳು ಶ್ರೀಮಠದ ಜಾತ್ರೆಗೆ ಆಗಮಿಸುತ್ತಾರೆ. ಬಸವ ಭವಿಷ್ಯವನ್ನು ಆಲಿಸಲೇಂದೇ ಬರುತ್ತಾರೆ. ಕಳೆದ ವರ್ಷ ಅನ್ನದ ರಾಶಿ ಮೇಲೆ ಬಲಗಾಲು ಸ್ಪರ್ಶ ಮಾಡಿತ್ತು. ಹಾಗಾಗಿ ರಾಜ್ಯದಲ್ಲಿ ಮಳೆ-ಬೆಳೆ ಉತ್ತಮವಾಗಿರಲಿದೆ ಎಂಬ ನಂಬಿಕೆ. 2017 ಮತ್ತು 2016ರಂದು ಎಡಗಾಲು ಸ್ಪರ್ಶ ಮಾಡಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಆ ಎರಡು ವರ್ಷ ಭೀಕರ ಬರಗಾಲಕ್ಕೆ ತುತ್ತಾಗಿದ್ದನ್ನು ನಾವು ಗಮನಿಸಬಹುದಾಗಿದೆ. ಈ ವರ್ಷ ಮತ್ತೆ ಬಲಗಾಲಿನ ಸ್ಪರ್ಶ ಆಗಿರುವುದರಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.

ಬಸವನ ಭವಿಷ್ಯ ವೈಜ್ಷಾನಿಕವಾಗಿ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಇಲ್ಲಿನ ಭಕ್ತಾದಿಗಳು, ಗ್ರಾಮಸ್ಥರು ಹಿಂದಿನಿಂದಲು ಬಸವ ನಂದೀಶ್ವರನ ಭವಿಷ್ಯ ನಂಬಿಕೊಂಡು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *