ಬಾಗಲಕೋಟೆ: ಮಠಕ್ಕೆ ಬೀಗ ಹಾಕಲಾಗಿದೆ, ನೀವೆಲ್ಲ ಮುಖಂಡರು ಸೇರಿ ಪೀಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ. ಇಲ್ಲದಿದ್ರೆ ಹುನಗುಂದ (Hanagunda) ಪಟ್ಟಣದಲ್ಲಿರುವ ಯಾವುದಾದ್ರೂ ಭಕ್ತರ ಮನೆಯಲ್ಲೇ ಇರುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಭಾವುಕರಾಗಿ ನುಡಿದಿದ್ದಾರೆ.
ಪೀಠಕ್ಕೆ ಬೀಗ ಹಾಕಿದ ವಿಚಾರ ವಿವಾದವಾಗುತ್ತಿದ್ದಂತೆ ಸ್ವಾಮೀಜಿ ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಬೆಂಬಲಿಗರು ಹೇಳಿದಂತೆ ಮುನ್ನಡೆಯುವ ನಿರ್ಧಾರ ಕೈಗೊಂಡರು. ಸಭೆಯಲ್ಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರದ ಬಗ್ಗೆ ಸ್ವಾಮೀಜಿ ಮಾತನಾಡುತ್ತ ಭಾವುಕರಾದ್ರು. ನಂತರ ಸಮಾಜದ ಮುಖಂಡರ ನಿರ್ಧಾರದಂತೆ ನಾನು ಮುನ್ನೆಡೆಯುತ್ತೇನೆ ಎಂದರು.
ಪಂಚಮಸಾಲಿ ಪೀಠಕ್ಕೆ ಬೀಗ ಜಡಿದ ವಿಚಾರ ರಾಜ್ಯವ್ಯಾಪಿ ವಿವಾದವಾಗುತ್ತಿದ್ದಂತೆ ಪಂಚಮಸಾಲಿ ಸಮುದಾಯದ ನಾಯಕರಾದ ಮಾಜಿ ಸಚಿವ ಸಿ.ಸಿ.ಪಾಟೀಲ್ ಮತ್ತು ಅರವಿಂದ ಬೆಲ್ಲದ್ ಸೇರಿದಂತೆ ಅನೇಕರು ಶಾಸಕ ಕಾಶಪ್ಪನವರ (Vijayanand Kashappanavar) ನಡೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಏನಿದು ವಿವಾದ?
ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ ಪಂಚಮಸಾಲಿ ಗುರು ಪೀಠಕ್ಕೆ ಬೀಗ ಜಡಿಯಲಾಗಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಒಡಕು ಮೂಡ್ತಿದ್ದಂತೆ, ಶಾಸಕ ಕಾಶಪ್ಪನವರ ಹಾಗೂ ಸ್ವಾಮೀಜಿ ಸಂಬಂಧಲ್ಲಿ ಬಿರುಕು ಮೂಡಿತ್ತು. ಶಾಸಕ ಕಾಶಪ್ಪನವರ್ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್‌ನ ಅಧ್ಯಕ್ಷರಾದ ನಂತರ ಸ್ವಾಮೀಜಿ ಗುರುಪೀಠಕ್ಕೆ ಬರುವುದು ಅಪರೂಪವಾಗಿತ್ತು.
ಪೀಠದ ಆವರಣದಲ್ಲಿ ರಾತ್ರಿ ಸಮಯದಲ್ಲಿ ಬೇರೆ ರೀತಿಯ ಚಟುವಟಿಕಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಕಾಶಪ್ಪನವರ ಅಣತಿಯಂತೆ ಪೀಠಕ್ಕೆ ಬೀಗ ಜಡಿಯಲಾಗಿತ್ತು. ಬೀಗ ಜಡಿದ ನಂತರ ಸ್ವಾಮೀಜಿಯವರ ಕೆಲ ಬೆಂಬಲಿಗರು ಪೀಠದ ಬೀಗ ಮುರಿದಿದ್ದಾರೆ ಎಂದು ಕಾಶಪ್ಪನವರ ಬೆಂಬಲಿಗ ಚಂದ್ರಶೇಖರ ಚಿತ್ತರಗಿ ಅವರು ಹುನಗುಂದ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಮಲ್ಲನಗೌಡ ಪಾಟೀಲ್, ಬಾಬುಗೌಡ ಪಾಟೀಲ್, ಚಂದ್ರಶೇಖರ ದೇವಲಾಪುರ ಸೇರಿದಂತೆ 7 ಮಂದಿ ಪೀಠದ ಕೀ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಕ್ರಮವಾಗಿ ಕೀ ಮುರಿದು ಒಳಗಡೆ ಹೋಗಿ, ಮುಖ್ಯ ಗೇಟ್, ಮಠದ ಮರದ ಬಾಗಿಲು ಒಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಈಗ ಬೀಗ ಜಡಿದ ಪೀಠದ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಹೊಸ ಪೀಠದ ಚರ್ಚೆ ಶುರುವಾಗಿತ್ತು. ಇನ್ನೊಂದೆಡೆ ವಿಜಯಾನಂದ ಕಾಶಪ್ಪನವರ್ ಅವರು ಪ್ರಸಂಗ ಬಂದರೆ ಪೀಠಾಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಮತ್ತೊಂದೆಡೆ ಮಾಜಿ ಸಚಿವ ಸಿ.ಸಿ ಪಾಟೀಲ್ ಅವರು ಗದಗ ಜಿಲ್ಲೆಯ ಮಲಪ್ರಭಾ ತೀರದಲ್ಲಿ ಹೊಸ ಪಂಚಮಸಾಲಿ ಪೀಠ ಕಟ್ಟಿಸಿಕೊಡುತ್ತೇವೆ ಎಂದು ಗುಡುಗಿದ್ದರು.