ವಿಜಯಪುರ ಶೂಟೌಟ್‌ ಕೇಸ್‌ನಲ್ಲಿ 3ನೇ ಆರೋಪಿ – ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್‌ ಪೀರಾ ಯಾರು?

Public TV
1 Min Read

ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಪೀರಾ (Tanveer Peera) ಈ ವರ್ಷದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ನಡೆದಿದ್ದ ಶೂಟೌಟ್ ಕೇಸಲ್ಲಿ ಮೂರನೇ ಆರೋಪಿಯಾಗಿದ್ದಾರೆ.

ಮೇ 6 ರಂದು ವಿಜಯಪುರದಲ್ಲಿ ನಡೆದ ಶೂಟೌಟ್‌ನಲ್ಲಿ ರೌಡಿ ಶೀಟರ್ ಹೈದರಾಲಿ ನದಾಫ್ ಎಂಬುವನ ಹತ್ಯೆ ನಡೆದಿತ್ತು. ಆ ಹತ್ಯೆಯನ್ನು ತನ್ವೀರ್‌ ಪೀರಾ ಹಾಸ್ಮಿ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹತ್ಯೆಯಾದ ಹೈದರಾಲಿ ಪತ್ನಿ ನಿಶಾತ್ ದೂರು ದಾಖಲಿಸಿದ್ದರು. ದೂರಿನಲ್ಲಿ ತನ್ವೀರ್ ಪೀರಾ ಹೆಸರನ್ನು ಕೂಡ ಹಾಕಲಾಗಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದೆ.

 

ವಿಜಯಪುರ ಮೂಲದವ ಸದ್ಯ ಸೂಫಿ ಎಂದು ಗುರುತಿಸಿಕೊಂಡಿರುವ ತನ್ವೀರ್ ಪೀರಾ ದೇಶಾದ್ಯಂತ ಸುತ್ತಾಟ ನಡೆಸುತ್ತಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basangouda Patil Yatnal) ಮತ್ತು ತನ್ವೀರ್ ಪೀರಾ ನಡುವಣ ವೈರತ್ವ ಇಂದಿನದ್ದಲ್ಲ. 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್ ವಿರುದ್ಧ ತನ್ವೀರ್ ಅಬ್ಬರಿಸಿದ್ದರು.

ಮುಂದೆ ಬಕ್ರೀದ್ ಬರಲಿದೆ. ಆಗ ಕುರುಬಾನಿ ಕೊಡುತ್ತೇವೆ. ಆಗ ಸೈತಾನ್ ವಿರೋಧಿಸಿದರೆ ನಾವು ಸುಮ್ಮನಿರಲ್ಲ. ಒಂದು ಕುರುಬಾನಿ ಜೊತೆಗೆ ಇನ್ನೊಂದು ಕುರುಬಾನಿ ಆಗಬಾರದು. ಈಗಲೇ ಎಚ್ಚರಿಸುತ್ತಿದ್ದೇನೆ ಎಂದಿದ್ದರು. ಈ ಸಂಬಂಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ತನ್ವೀರ್ ವಿರುದ್ಧ ಕೇಸ್ ದಾಖಲಾಗಿತ್ತು.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಯತ್ನಾಳ್‌, ತನ್ವೀರ್‌ ಪೀರಾ ಮದರಸಾ ನಡೆಸುತ್ತಿದ್ದು, ವಿಮಾನದಲ್ಲೇ ದೇಶ, ವಿದೇಶಗಳನ್ನು ಸುತ್ತುತ್ತಿದ್ದಾರೆ. ಈ ವ್ಯಕ್ತಿಗೆ ಹಣ ನೀಡುವವರು ಯಾರು? ಟಿಕೆಟ್‌ ಬುಕ್‌ ಮಾಡುವವರು ಯಾರು ಎಂದು ಪತ್ತೆ ಹಚ್ಚಿದರೆ ಎಲ್ಲಾ ವಿಚಾರಗಳು ಬಯಲಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಈ ವ್ಯಕ್ತಿಯ ಮೇಲೆ ತನಿಖೆ ನಡೆಸಬೇಕೆಂದು ಕೋರಿ ಪತ್ರ ಬರೆದಿದ್ದೇನೆ ಎಂದು ಹೇಳಿದರು.

Share This Article