ನನ್ನ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆಯೇ ಹೊರತು ಧಕ್ಕೆ ಆಗಿಲ್ಲ: ಯತ್ನಾಳ್

Public TV
3 Min Read

– ಮೋದಿ ಭೇಟಿಗೆ ಅವಕಾಶ ಕೋರಿದ ಶಾಸಕರು

ವಿಜಯಪುರ: ನೆರೆ ಪರಿಹಾರ ವಿಚಾರವಾಗಿ ನನ್ನ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆಯೇ ಹೊರತಾಗಿ ಪಕ್ಷಕ್ಕೆ ಯಾವುದೇ ರೀತಿ ಧಕ್ಕೆ ಆಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನೆರೆ ಪರಿಹಾರಕ್ಕೆ ಅನುದಾನ ಪ್ರಕಟಿಸದಿದ್ದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಸದ್ಯ ಶಾಸಕರು ಅದಕ್ಕೆ ಉತ್ತರ ನೀಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:
ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಜನರು ಸಂತ್ರಸ್ತರಾಗಿದ್ದಾರೆ. ಇಲ್ಲಿನ ಜನರು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಾಗಾಗಿ ತಾವು ಆದಷ್ಟು ನೆರೆ ಪರಿಹಾರವನ್ನು ನೀಡಬೇಕು ಎಂದು ನಾನೊಬ್ಬ ಜನಪ್ರತಿನಿಧಿಯಾಗಿ ಆಗ್ರಹಿಸಿದ್ದೆ. ಇದರಲ್ಲಿ ಯಾವುದೇ ರಾಜಕೀಯ ಹೇಳಿಕೆ ವಿಚಾರವಿಲ್ಲ. ನಾನು ಹಾಗೂ ಕರ್ನಾಟಕದ ಜನತೆ ನಿಮ್ಮನ್ನು ಮೆಚ್ಚಿಕೊಂಡಿದ್ದೇವೆ ಹಾಗೂ ಗೌರವಿಸುತ್ತೇವೆ. ಆ ಕಾರಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ.

ಪ್ರಧಾನಿ ಮೋದಿ ಜಿ ನಿಮ್ಮಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡಿದ್ದೇವೆ. ನಿಮ್ಮಿಂದಲೇ ಇಂದು ಇಡಿ ದೇಶ ಅತ್ಯುನ್ನತವಾಗಿ ಬೆಳವಣಿಗೆ ಆಗುತ್ತಿದೆ. ನಾನು ಮಾತನಾಡಿದ್ದು ಸಂತ್ರಸ್ತರಿಗೆ ಸಹಾಯ ಮಾಡಿ ಎಂಬುದಾಗಿದೆ, ಹೊರತಾಗಿ ಪಕ್ಷದ ವರ್ಚಸ್ಸು ಮತ್ತು ನಾಯಕರ ಅವಹೇಳನಕ್ಕೆ ಕಾರಣವಾಗಿಲ್ಲ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ನಾನು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಸಲುವಾಗಿ ಹೋರಾಟ ಮಾಡಿದ್ದೆ. ಆಗ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲು ಮುಂದಾಗಿದ್ದೆ. ಇದಕ್ಕೆ ವಾಜಪೇಯಿ ಅವರು ಸ್ಪಂದಿಸಿದ್ದರು. ಈಗಲೂ ಸಹ ನಾನು ಸಂತ್ರಸ್ತರಿಗೆ ಪರಿಹಾರ ಸಿಗಬೇಕು ಎಂದು ಮಾತನಾಡಿದ್ದೇನೆ. ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿಲ್ಲ.

ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಕೆಲವರು ಹೀಗೆ ಮಾಡಿದ್ದಾರೆ ಎಂಬ ಅನುಮಾನ ಶುರುವಾಗಿದೆ. ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ನೆರೆ ಸಂತ್ರಸ್ತರ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ. ಭೇಟಿಗೆ ಅವಕಾಶ ನೀಡಲು ವಿನಂತಿಸುತ್ತಿದ್ದೇನೆ ಎಂದು ಶಾಸಕರು ಅಕ್ಟೋಬರ್ 5ರಂದು ಪತ್ರ ಬರೆದಿದ್ದಾರೆ.

ಯತ್ನಾಳ್ ಹೇಳಿದ್ದೇನು?
ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಅಂತ ನಮೋ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದರು. ಸೂಲಿಬೆಲೆ ಅವರ ಈ ಹೇಳಿಕೆ ಬೆಂಬಲ ನೀಡಿದ್ದ, ಬಿಜೆಪಿ ಶಾಸಕ ಯತ್ನಾಳ್ ಅವರು, ಸೂಲಿಬೆಲೆಗೆ ಬೈಯ್ದು, ಪ್ರಧಾನಿ ಮೋದಿಗೆ ಅವಮಾನ ಮಾಡಬೇಡಿ. ರಾಜ್ಯದ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಹುಬ್ಬಳ್ಳಿ- ಬೆಂಗಳೂರಿನಲ್ಲಿ ಇರುವ ಬದಲು ಮೊದಲು ದೆಹಲಿಗೆ ಹೋಗಿ ಕೆಲಸ ಮಾಡಿ. ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ನೋಟಿಸ್‍ನಲ್ಲಿ ಏನಿದೆ?
ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಓಂ ಪಾಠಕ್ ಅವರಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿಯಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪಕ್ಷದ ನಾಯಕರಾಗಿ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂಬ ಆರೋಪವನ್ನು ಮಾಡಿ ಸರ್ಕಾರ ಮೇಲೆ ಜನರಿಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಿದ್ದೀರಿ. ಈ ಬಗ್ಗೆ ಪಕ್ಷದ ನಾಯಕರಾಗಿ ವಿವರಣೆ ನೀಡಿ ಎಂದು ಸೂಚಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *