ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

Public TV
1 Min Read

ನವದೆಹಲಿ: ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಕೊಂಚ ಮೌನವಾದಂತೆ ಕಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತೆರೆಮರೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಕುಟುಂಬಕ್ಕೆ ಸೆಡ್ಡು ಹೊಡೆಯಲು ಲಿಂಗಾಯತ ಸಮಾವೇಶ (Lingayat Samavesha) ಮಾಡಲು ಚಿಂತನೆ ನಡೆಸಿದ್ದಾರೆ.

ವಕ್ಫ್ ಹೋರಾಟದ (Waqf Protest) ನೆಪದಲ್ಲಿ ದೆಹಲಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಗುಂಪು ವಿವಿಧ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ನಡುವೆಯೇ ಯತ್ನಾಳ್ ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡಿ ಬಂದಿದ್ದರು.

ಈ ಭರವಸೆ ಬೆನ್ನಲ್ಲೇ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಯತ್ನಾಳ್ ಮತ್ತು ಅವರ ಟೀಂ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ ಸಮಾವೇಶ ಮಾಡಲು ತಯಾರಿ ಆರಂಭಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜಿ.ಎಂ ಜಿದ್ದೇಶ್ವರ್ (GM Siddeshwara) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶಿಕಾರಿಪುರ ಅಥವಾ ಸೊರಬದಲ್ಲಿ ಲಿಂಗಾಯತ ಸಮಾವೇಶ ನಡೆಸಿ ಸಾದರ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶ‌ನಕ್ಕೆ ಚಿಂತನೆ ನಡೆಸಿದ್ದಾರೆ.

ವಿಧಾನಸಭೆ ಕಲಾದ ಬಳಿಕ ಸಮಾವೇಶ ನಡೆಸಬಹುದು ಎನ್ನಲಾಗಿದ್ದು, ಪಕ್ಷದ ವೇದಿಕೆಯಲ್ಲಿ ಈ ಕಾರ್ಯಕ್ರಮ ಮಾಡದೇ ಖಾಸಗಿಯಾಗಿ ಮಾಡುವ ಮೂಲಕ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ತೊಡೆ ತಟ್ಟಲು ಸಿದ್ಧತೆ ಮಾಡಿಕೊಂಡಿದ್ದು ಇದು ಮತ್ತೊಂದು ಹಂತದ ಆತಂರಿಕ‌ ಕಲಹಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

 

Share This Article