ಸಾಂಸ್ಕೃತಿಕ ಉಡುಗೆ ತೊಟ್ಟವರಿಗೆ ಬಾರ್‌ನಲ್ಲಿ ಪ್ರವೇಶವಿಲ್ಲ ಎಂದ ಸಿಬ್ಬಂದಿ- ಮಹಿಳೆ ತರಾಟೆ

Public TV
2 Min Read

ನವದೆಹಲಿ: ಸಾಂಸ್ಕೃತಿಕ ಉಡುಗೆ ಧರಿಸಿದ್ದಕ್ಕೆ ಬಾರ್ ಒಳಗೆ ಬಿಟ್ಟಿಲ್ಲ ಎಂದು ಆರೋಪಿಸಿ ಸಿಬ್ಬಂದಿಗೆ ಮಹಿಳೆ ತರಾಟೆ ತೆಗೆದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಸಂತ್ ಕೂಂಜ್ ಪ್ರದೇಶದ ಕೈಲಿನ್ ಅಥವಾ ಐವಿ ಬಾರ್ ನಲ್ಲಿ ಘಟನೆ ನಡೆದಿದ್ದು, ಸಾಂಸ್ಕೃತಿಕ ಧಿರಿಸಿನಲ್ಲಿದ್ದ ಸಂಗೀತಾ ಕೆ.ನಾಗ್ ಬಾರ್ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಬಾರ್ ಸಿಬ್ಬಂದಿ ಸಂಗೀತಾ ಅವರನ್ನು ತಡೆದು ಸಾಂಸ್ಕೃತಿಕ ಉಡುಗೆ ತೊಟ್ಟವರನ್ನು ಬಾರ್ ಒಳಗೆ ಬಿಡುವುದಿಲ್ಲ ಎಂದು ತಡೆದಿದ್ದಾರೆ. ಇದನ್ನು ಸಂಗೀತಾ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಘಟನೆ ಕುರಿತು ವಿಡಿಯೋ ಟ್ವೀಟ್‍ಮಾಡಿ ಬರೆದುಕೊಂಡಿರುವ ಅವರು, ಈ ಘಟನೆಯಿಂದ ನನಗೆ ಶಾಕ್ ಆಯಿತು. ನಾನು ಬಾರ್ ಪ್ರವೇಶಿಸುತ್ತಿದ್ದ ವೇಳೆ ಸಾಂಸ್ಕೃತಿಕ ಉಡುಗೆ ತೊಟ್ಟಿದ್ದರಿಂದ ಒಳಗೆ ಬಿಡುವುದಿಲ್ಲ ಎಂದು ತಡೆದರು. ಭಾರತದ ಕೆಲವು ರೆಸ್ಟೋರೆಂಟ್‍ಗಳಲ್ಲಿ ಸ್ಮಾರ್ಟ್ ವಸ್ತ್ರ ಧರಿಸಿದವರನ್ನು ಬಿಡುತ್ತಾರೆ. ಆದರೆ ಸಾಂಸ್ಕೃತಿಕ ಉಡುಗೆ ತೊಟ್ಟವರನ್ನು ಬಿಡುವುದಿಲ್ಲ. ಭಾರತೀಯನೆಂಬ ಹೆಮ್ಮೆ ಏನಾಯಿತು, ಈ ಕುರಿತು ಒಂದು ನಿಲುವು ತೆಗೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಬಾರ್ ನ ಡ್ರೆಸ್ ಕೋಡನ್ನು ಸಹ ಮಹಿಳೆ ಹಂಚಿಕೊಂಡಿದ್ದು, ಸ್ಮಾರ್ಟ್ ಧಿರಿಸಿಗೆ ಮಾತ್ರ ಅವಕಾಶ. ಶಾರ್ಟ್ಸ್ ಹಾಗೂ ಸ್ಲಿಪ್ಪರ್ಸ್ ಗೆ ಅನುಮತಿ ಇಲ್ಲ ಎಂದಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಹಲವರು ರೆಸ್ಟೋರೆಂಟ್‍ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಸಹ ಪ್ರತಿಕ್ರಿಯಿಸಿದ್ದು, ಇದೆಂಥ ನಿಯಮ ಕೈಲಿನ್ ಅಥವಾ ಐವಿ ಇನ್ನಾವುದೇ ರೆಸ್ಟೋರೆಂಟ್ ಆಗಲಿ, ಸಾಂಸ್ಕೃತಿಕ ಉಡುಗೆ ಧರಿಸಿರುವ ಅತಿಥಿಗಳಿಗೆ ಅವಕಾಶ ನೀಡಬೇಕು. ಇಂತಹ ನಿರ್ಬಂಧ ಹೇರುವ ಮೂಲಕ ವಸಾಹತುಶಾಹಿ ಪದ್ಧತಿ ಅನುಸರಿಸುವ ರೆಸ್ಟೋರೆಂಟ್‍ಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರಿಂದ ರೆಸ್ಟೋರೆಂಟ್ ತನ್ನ ಫೇಸ್ಬುಕ್ ಖಾತೆಯ ಮೂಲಕ ಕ್ಷಮೆಯಾಚಿಸಿದೆ. ಈ ವಿಡಿಯೋದಲ್ಲಿರುವ ಸಿಬ್ಬಂದಿ ನಮ್ಮ ಟೀಮಿನ ಹೊಸ ಸದಸ್ಯ, ಈ ವಿಡಿಯೋದಲ್ಲಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನನ್ನ ಅಥವಾ ನಮ್ಮ ಟೀಮ್‍ನ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಕಂಪನಿಯಲ್ಲಿ ಎಲ್ಲಿಯೂ ಸಾಂಸ್ಕೃತಿಕ ಉಡುಗೆ ತೊಟ್ಟವರನ್ನು ನಿರಾಕರಿಸುತ್ತೇವೆ ಎಂದು ಹೇಳಿಲ್ಲ ಎಂದು ಕೈಲಿನ್ ಎಕ್ಸ್‍ಪಿರಿಯನ್ಸ್ ಅಥವಾ ಐವಿಯ ನಿರ್ದೇಶಕ ಸೌರಭ್ ಖಾನಿಜೋ ಫೆಸ್ಬುಕ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವೇ ಹೊತ್ತಿನಲ್ಲಿ ಈ ಮೆಸೇಜ್‍ನ್ನು ಸಂಸ್ಥೆ ಡಿಲೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *