ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ

Public TV
1 Min Read

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿವಾದ ದೇಶಾದ್ಯಂತ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇತ್ತ ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಅಯ್ಯಪ್ಪ ಸನ್ನಿಧಿಗೆ ಭಕ್ತರು ತೆರಳುವ ಮುನ್ನ ಇರುವ 18 ಮೆಟ್ಟಲ ಬಳಿಯ ಬೃಹತ್ ಅಶ್ವತ್ಥ ಮರಕ್ಕೂ ಭಕ್ತರು ನಮಿಸಿ ಮುಂದೇ ಸಾಗುತ್ತಾರೆ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಪಡೆದ ಆಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಪರಿಣಾಮ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಭಕ್ತರನ್ನು ವಾಲಿಯ ನಡಪಂಥಲ್ ಬಳಿ ಕೆಲ ಸಮಯ ತಡೆಯಲಾಯಿತು. ಬೆಂಕಿ ನಂದಿಸಿದ ಬಳಿಕ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಮರದ ಪಕ್ಕದಲ್ಲೇ ಅಗ್ನಿ ಕುಂಡವಿದ್ದು, ಹಲವು ಶತಮಾನಗಳಿಂದ ಅಗ್ನಿ ಕುಂಡದಲ್ಲಿ ಭಕ್ತರು ಸಮರ್ಪಿಸಿದ ತುಪ್ಪ ಕಾಯಿ ಅರ್ಪಿಸುತ್ತಿದ್ದರು ಯಾವುದೇ ಅವಘಡ ನಡೆದ ಬಗ್ಗೆ ಮಾಹಿತಿ ಇಲ್ಲ. ಅಗ್ನಿ ಕುಂಡದ ಮೇಲೆ ಕೊಂಬೆಗಳು ಚಾಚಿಕೊಂಡಿದ್ದರು ಇದುವರೆಗೂ ಬೆಂಕಿಯ ತಾಪದಿಂದ ಮರಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಇಂತಹ ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.

ಶತಮಾನಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದ ಅಯ್ಯಪ್ಪ ಸನ್ನಿಧಿಗೆ ಜನವರಿ 1 ರಂದು ಮಹಿಳೆಯರ ಪ್ರವೇಶ ನಡೆದಿತ್ತು. ಇದಕ್ಕೆ ಕೇರಳ ಸರ್ಕಾರ ಸಂಪೂರ್ಣ ಬೆಂಬಲ ನೀಡಿತ್ತು. ಸದ್ಯ ಮರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಪಾಯದ ಮುನ್ಸೂಚನೆಯೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *