ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

Public TV
2 Min Read

– ಈವರೆಗೆ ಹತ್ಯೆಗೆ ಸಂಬಂಧಿಸಿದ 9 ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದಲ್ಲಿ (Bantwal) ನಡೆದ ಅಬ್ದುಲ್ ರಹಿಮಾನ್ (Abdul Rahiman) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಟ್ವಾಳ ತುಂಬೆ ಗ್ರಾಮದ ನಿವಾಸಿ ಶಿವಪ್ರಸಾದ್ (33) ಬಂಧಿತ ಆರೋಪಿ. ಈಗಾಗಲೇ ಪ್ರಕರಣ ಸಂಬಂಧ ಬಂಟ್ವಾಳದ ಕುರಿಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿ ಪೃಥ್ವಿರಾಜ್ (21), ಅಮ್ಮುಂಜೆ ನಿವಾಸಿ ಚಿಂತನ್ (19), ಸುಮಿತ್, ರವಿರಾಜ್ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಬಂಟ್ವಾಳದ ರಾಯಿ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ.ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ | ಮತ್ತಿಬ್ಬರು ಆರೋಪಿಗಳು ಅರೆಸ್ಟ್‌ – ಹತ್ಯೆಗೆ ಕಾರಣವೇ ಇನ್ನೂ ಸಸ್ಪೆನ್ಸ್!‌

ಹಳೇ ದ್ವೇಷದ ಹಿನ್ನೆಲೆ ಈ ಹತ್ಯೆ ನಡೆಸಿದ್ದಾರೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪೂರ್ವದ್ವೇಷದ ಹತ್ಯೆಯೋ, ಕೋಮುದ್ವೇಷದ ಹತ್ಯೆಯೋ, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರದ ಹತ್ಯೆಯೋ ಅನ್ನೋದು ಖಚಿತಗೊಂಡಿಲ್ಲ. ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನ ಮಾಡಿ ತನಿಖೆ ನಡೆಸುತ್ತಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾಗಿದ್ದು ಹೇಗೆ?
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೆ ತಿಂಗಳು ಕಳೆಯುವ ಮೊದಲೇ ಮೇ 27ರಂದು ಬಂಟ್ವಾಳದ ಕುರಿಯಾಳ ಈರಾಕೋಡಿ ಎಂಬಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ ಬಳಿ ಒಂದು ಲೋಡ್ ಮರಳುಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದರು. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದರು. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

Share This Article