ಬೆಂಗಳೂರು ಗ್ರಾಮಾಂತರ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಡುವೆ ಪ್ರಾಣಿ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದ (Bannerghatta National Park) ಟಿಕೆಟ್ ದರವನ್ನು 20% ರಷ್ಟು ಸರ್ಕಾರ ಏರಿಕೆ ಮಾಡಿದ್ದು, ಆ.1 ರಿಂದ ಜಾರಿಗೆ ಬರಲಿದೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಟಿಕೆಟ್ ದರ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. 20% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಅಂತಿಮ ಆದೇಶ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಆ.1 ರಿಂದ ಟಿಕೆಟ್ ದರ ಏರಿಕೆ ಅಧಿಕೃತವಾಗಲಿದೆ. ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನದ ಝೂ ವೀಕ್ಷಣೆಗೆ ವಯಸ್ಕರಿಗೆ ಹಾಲಿ ಟಿಕೆಟ್ ದರ 100 ರೂ. ಇದ್ದು, 120 ರೂ. ಆಗಲಿದೆ. ಮಕ್ಕಳಿಗೆ ಹಾಲಿ ದರ 50 ರೂ. ಇದ್ದು, 60 ರೂ. ಆಗಲಿದೆ. ಹಿರಿಯ ನಾಗರಿಕರಿಗೆ ಹಾಲಿ ಟಿಕೆಟ್ ದರ 60 ರೂ. ಇದ್ದು, 70 ರೂ. ಆಗಲಿದೆ. ಅಲ್ಲದೇ, ಸಫಾರಿ ಕಾಂಬೋ ಪ್ಯಾಕ್ ದರ ಕೂಡ ಹೆಚ್ಚಳವಾಗಿದ್ದು, ವಾರದ ದಿನಗಳಲ್ಲಿ 350 ರೂ. ಇದ್ದದ್ದು, 370 ರೂ. ಆಗಲಿದೆ. ವಾರದ ಕೊನೆ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ 400 ರೂ. ದರ 420 ರೂ. ಆಗಲಿದೆ. ಇದನ್ನೂ ಓದಿ: ಮಂತ್ರಾಲಯ | ಸ್ನಾನಘಟ್ಟದ ಬಳಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ
ಪ್ರಾಣಿಗಳ ಆಹಾರ, ನಿರ್ವಹಣೆ ಸಿಬ್ಬಂದಿ ವೇತನ ಹೆಚ್ಚಳವಾಗಿದೆ. ಆದರೆ, ಕಳೆದ ಐದು ವರ್ಷದಿಂದ ಮೃಗಾಲಯದ ಟಿಕೆಟ್ ದರ ಏರಿಕೆ ಆಗಿಲ್ಲ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರ ಟಿಕೆಟ್ ಹಣವೇ ಆದಾಯದ ಮೂಲವಾಗಿದೆ. ಹಾಗಾಗಿ, 50% ರಷ್ಟು ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ 20% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ.
ಮೃಗಾಲಯ ಪ್ರಾಧಿಕಾರದ ಆದೇಶದಂತೆ ಆ.1 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಟಿಕೆಟ್ ದರ 20% ರಷ್ಟು ಏರಿಕೆಗೆ ಪ್ರವಾಸಿಗರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ. ಇದರ ನಡುವೆ ದಿನನಿತ್ಯದ ಜಂಜಾಟದಿಂದ ರೋಸಿ ಹೋಗಿ ಮನರಂಜನೆಗಾಗಿ ಮಕ್ಕಳಿಗೆ ಅಪರೂಪದ ವನ್ಯಜೀವಿಗಳನ್ನು ಪರಿಚಯಿಸಲು ದೂರದ ಊರುಗಳಿಂದ ಕುಟುಂಬದೊಂದಿಗೆ ಪ್ರವಾಸಿಗರು ಬರ್ತಾರೆ. ದೇಶವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಬರ್ತಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಕಷ್ಟು ಹಣ ಕೂಡ ಸಂಗ್ರಹ ಆಗುತ್ತಿದೆ. ಆದರೂ, ಟಿಕೆಟ್ ದರ ಏರಿಕೆ ಮಾಡುತ್ತಿರುವುದರ ಬಿಸಿ ಪ್ರವಾಸಿಗರಿಗೆ ತಟ್ಟಲಿದೆ. ಈಗಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಭಿವೃದ್ಧಿ ಹೊಂದಿದೆ. ಪ್ರಾಣಿಗಳ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ಸರ್ಕಾರದಿಂದ ಅನುದಾನ ಪಡೆಯಲಿ ಎನ್ನುತಾರೆ. ಕೆಲ ಪ್ರವಾಸಿಗರು ವನ್ಯಜೀವಿಗಳ ನಿರ್ವಹಣೆಗಾಗಿ ಟಿಕೆಟ್ ದರ ಹೆಚ್ಚಿಸಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿರಡಿ ಸಾಯಿಬಾಬಾನ ದರ್ಶನ ಪಡೆದ ಡಿಕೆಶಿ – ಪ್ರಾರ್ಥನೆ ಫಲ ನೀಡಲಿದೆ ಅಂತ ಪೋಸ್ಟ್
ಬನ್ನೇರುಘಟ್ಟ ಜೈವಿಕ ಉದ್ಯಾನ ಟಿಕೆಟ್ ದರ ಹೆಚ್ಚಳದ ಬಗ್ಗೆ ಪ್ರವಾಸಿಗರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಆದರೂ, ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಮತ್ತು ಮತ್ತಷ್ಟು ಅಪರೂಪದ ಪ್ರಾಣಿಗಳನ್ನು ಕಾಣುವಂತಾಗಬೇಕು ಎಂದು ಆಗ್ರಹ ಕೂಡ ಕೇಳಿ ಬರುತ್ತಿದೆ.