ಕಣ್ಣು ಬಿಡುವ ಮುನ್ನವೇ ತಾಯಿಯಿಂದ ಬೇರ್ಪಟ್ಟ ಸಿಂಹದ ಮರಿಗಳು – ಮೇಕೆಯೇ ಅಮ್ಮ

Public TV
2 Min Read

– ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಯ್ತು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್

ಆನೇಕಲ್ : ಕಣ್ಣು ಬಿಡುವ ಮುನ್ನವೇ ತನ್ನ ತಾಯಿಯಿಂದ ಬೇರ್ಪಟ್ಟಿದ್ದ ಸಿಂಹದ ಮರಿಗಳಿಗೆ ಹೊಸ ತಾಯಿಯನ್ನು ನೀಡುವ ಮೂಲಕ ಅವುಗಳಿಗೆ ಮರುಜೀವ ನೀಡಿರುವ ಅಪರೂಪದ ಕಾರ್ಯಕ್ಕೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಸಾಕ್ಷಿಯಾಗಿದೆ.

ನಗರದ ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳ ಹಿಂದೆ ಸನಾ ಹಾಗೂ ಶಂಕರ್ ಎಂಬ ಸಿಂಹಗಳು ಮುದ್ದಾದ ಸಿಂಹದ ಮರಿಗಳಿಗೆ ಜನ್ಮ ನೀಡಿದ್ದವು. ಒಂದು ತಿಂಗಳ ಹಿಂದೆ ಸನಾ 4 ಸಿಂಹದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಹುಟ್ಟಿದ್ದ ಒಂದೇ ದಿನಕ್ಕೆ 1 ಮರಿಯನ್ನ ತಿಂದು ಹಾಕಿದ್ದ ಸನಾ ಮತ್ತೊಂದು ಮರಿಯನ್ನ ತುಳಿದು ಕೊಂದಿತ್ತು. ಇನ್ನುಳಿದ ಎರಡು ಮರಿಗಳ ಆರೈಕೆಯನ್ನು ಮಾಡುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಹೀಗಾಗಿ ಈ ಎರಡು ಮರಿಗಳನ್ನ ಕಣ್ಣು ಬಿಡುವ ಮುನ್ನವೇ ಉದ್ಯಾನವನದ ಅಧಿಕಾರಿಗಳು ತಾಯಿ ಸನಾಳಿಂದ ಅನಿವಾರ್ಯವಾಗಿ ದೂರ ಮಾಡಿ ಆರೈಕೆ ಮಾಡಿದ್ದರು.

ತಾಯಿಯಿಂದ ಬೇರ್ಪಟ್ಟಿದ್ದ ಮರಿಗಳಿಗೆ ಹಾಲು ಕೂಡಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಇದರಿಂದ ಪಾರ್ಕ್ ನ ವೈದ್ಯ ಡಾ. ಉಮಾಶಂಕರ್ ಮರಿಗಳಿಗೆ ಮೇಕೆಯ ಹಾಲು ಪೂರೈಸಲು 3 ಮೇಕೆಗಳನ್ನ ಖರೀದಿಸಿ ಮರಿಗಳಿಗೆ ಮೇಕೆಗಳನ್ನು ಎರಡನೇ ತಾಯಿಯಾಗಿ ಪರಿಚಯಿಸಿದರು. ಮೇಕೆ ಹಾಲನ್ನು ಕುಡಿದ ಸಿಂಹದ ಮರಿಗಳು ಕ್ರಮೇಣ ಚೇತರಿಸಿಕೊಂಡು ಈಗ ಆರೋಗ್ಯವಾಗಿದ್ದು, ಇಂದು ಮೃಗಾಲಯದ ಪ್ರಮುಖ ಆಕರ್ಷಣೆಯಯಾಗಿದೆ.

ಪುಟ್ಟ ಮರಿಗಳನ್ನು ತಾಯಿಯಿಂದ ಬೇರೆ ಮಾಡಿ ಅವುಗಳನ್ನ ಉಳಿಸಿಕೊಂಡಿರುವುದು ಪಾರ್ಕ್ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದ್ದು, ಈ ಹಿಂದೆ ಸಹ ಸನಾ ತನ್ನ ಎಲ್ಲಾ ಮರಿಗಳನ್ನ ತಿಂದು ಹಾಕಿತ್ತು. ಹೀಗಾಗಿ ಈ ಬಾರಿಯೂ ಅದೇ ರೀತಿ ತೊಂದರೆ ಮಾಡಬಹುದೆಂಬ ಮುಂಜಾಗ್ರತೆ ವಹಿಸಿದ ಪಾರ್ಕ್ ಡಿಡಿ ಕುಶಾಲಪ್ಪ ಹಾಗೂ ಇಡಿ ಗೋಕುಲ್ ಹೊಸ ಉಪಾಯ ಮಾಡಿ ಮರಿಗಳನ್ನ ಉಳಿಸಿಕೊಂಡಿದ್ದಾರೆ.

ಒಂದು ತಿಂಗಳ ಮರಿಗಳು ಸ್ವಲ್ಪ ಮಾಂಸಾಹಾರ ಸಹ ಸೇವನೆ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮಕ್ಕಳಂತೆ ಓಡಾಡಿಕೊಂಡಿರುವ ಈ ಸಿಂಹದ ಮರಿಗಳನ್ನು ಆರೈಕೆ ಮಾಡುವಲ್ಲಿ ಸಿಬ್ಬಂದಿಗಳು ಕಾರ್ಯವೂ ಇದೆ. ಸದ್ಯ ಇನ್ನು ಎರಡು ತಿಂಗಳ ಕಾಲ ಮರಿಗಳಿಗೆ ಆರೈಕೆ ಅಗತ್ಯವಿದ್ದು, ಬಳಿಕ ತಾಯಿ ಸನಾ ಜೊತೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಇದೇ ರೀತಿ ಮರಿಗಳನ್ನು ತಿನ್ನುವ ಇನ್ನೂ ಕೆಲವು ಚಿರತೆಗಳಿದ್ದು ಅವುಗಳ ಮರಿಗಳನ್ನು ಕೂಡ ಇದೇ ರೀತಿ ರಕ್ಷಣೆ ಮಾಡಿ ಜೀವಂತ ಉಳಿಸಿಕೊಳ್ಳಬಹುದು ಎಂದು ಡಿಡಿ ಕುಶಾಲಪ್ಪ ತಿಳಿಸಿದ್ದಾರೆ.  ಇದನ್ನೂ ಓದಿ: ಅಮ್ಮನಿಂದ ಬೇರ್ಪಟ್ಟ ಕೋತಿಗೆ ಇದೀಗ ಮೇಕೆಯೇ ತಾಯಿ!

ತಾಯಿ ಬಳಿ ಹಾಲನ್ನೇ ಕುಡಿಯದ ಆ ಪುಟ್ಟ ಸಿಂಹದ ಮರಿಗಳಿಗೆ ಪಾರ್ಕ್‍ನ ಸಿಬ್ಬಂದಿ ಹಾಗೂ ವೈದ್ಯರೇ ತಂದೆ-ತಾಯಿಯಾಗುವ ಮೂಲಕ ಪೋಷಣೆ ಮಾಡುತ್ತಿದ್ದು, ತಾಯಿ ಮಡಿಲು ಸೇರಲು ಸಿದ್ಧವಾಗಿರುವ ಮರಿಗಳನ್ನ ಇನ್ನೂ ಕೆಲವೇ ತಿಂಗಳುಗಳಲ್ಲಿ ತಾಯಿ ಸನಾ ಜೊತೆ ಸಫಾರಿಯಲ್ಲಿ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ.  ಇದನ್ನೂ ಓದಿ: ತಾಯಿ ಸಿಂಹದ ಹೊಟ್ಟೆ ಸೇರುತ್ತಿದ್ದ 2 ಮರಿಗಳನ್ನು ರಕ್ಷಿಸಿದ ಸಿಬ್ಬಂದಿ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *