ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’

Public TV
3 Min Read

– ರೈಟಾಫ್ ಮಾಹಿತಿ ನೀಡಿದ ಆರ್‌ಬಿಐ
– ಆರ್‌ಟಿಐ ಅಡಿ ಮಾಹಿತಿ ಪಡೆದ ಸಾಕೇತ್ ಗೋಖಲೆ

ನವದೆಹಲಿ: ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಒಟ್ಟು 50 ಉದ್ಯಮಿಗಳ 68,607 ಕೋಟಿ ರೂ. ವಸೂಲಾಗದ ಸಾಲವನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಮನ್ನಾ(ರೈಟಾಫ್) ಮಾಡಿದೆ.

ಬ್ಯಾಂಕ್ ಗಳಿಗೆ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದ ವ್ಯಕ್ತಿಗಳ ಪೈಕಿ ಯಾರ ಸಾಲವನ್ನು ಸರ್ಕಾರ ಎಷ್ಟು ಪ್ರಮಾಣದಲ್ಲಿ ರೈಟಾಫ್ ಮಾಡಿದೆ? ಈ ಮಾಹಿತಿ ನೀಡಿ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಆರ್‌ಬಿಐ ಈ ಉತ್ತರವನ್ನು ನೀಡಿದೆ.

 

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ  ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಖಾತೆಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರು. ಈ ಕಾರಣಕ್ಕೆ ನಾನು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಕೇತ್ ಗೋಖಲೆ, ಆರ್‌ಬಿಐನ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಅವರು 2019ರ ಸೆಪ್ಟೆಂಬರ್ 30 ರವರೆಗಿನ 68,607 ಕೋಟಿ ರೂ. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಏ.24ರಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

2015 ಡಿಸೆಂಬರ್ 16ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಆರ್‌ಬಿಐ ವಿದೇಶಿ ಸುಸ್ತಿಗಾರರ ಮಾಹಿತಿಯನ್ನು ನೀಡಿಲ್ಲ. ಸುಸ್ತಿದಾರರು ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲವನ್ನು ಪಡೆದು ವಂಚಿಸಿದ್ದಾರೆ. ಈ ಪೈಕಿ ಕೆಲವರು ದೇಶ ಬಿಟ್ಟು ಪರಾರಿಯಾಗಿದ್ದು ಅವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಇದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿಸದೆ ಬಾರ್ಬಡೋಸ್‍ನ ಆಂಟಿಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್‍ನ 5,492 ಕೋಟಿ ರೂ. ಗಿಲಿ ಇಂಡಿಯಾ ಲಿಮಿಟೆಡ್‍ನ 1,447 ಕೋಟಿ ರೂ. ಹಾಗೂ ನಕ್ಷತ್ರ ಬ್ರಾಂಡ್ಸ್ ನ 1,109 ಕೋಟಿ ರೂ. ಸಾಲ ಮನ್ನಾವಾಗಿದೆ.

ಲಂಡನ್‍ನಲ್ಲಿದ್ದು ಕಾನೂನು ಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್‍ಲೈನ್ಸ್‍ನ 1,943 ಕೋಟಿ ರೂ., ರುಚಿ ಸೋಯಾ ಕಂಪನಿಯ 2,212 ಕೋಟಿ ರು. ಸುಸ್ತಿಸಾಲ ಕೂಡ ಮನ್ನಾ ಮಾಡಲಾಗಿದೆ.

ಯಾರ ಸಾಲ ಎಷ್ಟು ಮನ್ನಾ?
ಮೆಹುಲ್ ಚೋಕ್ಸಿ – 8,048 ಕೋಟಿ ರೂ.
ಆರ್‍ಇಐ ಅಗ್ರೋ ಲಿ. 4,314 ಕೋಟಿ ರೂ.
ವಿನ್ಸಮ್ ಡೈಮಂಡ್ಸ್ – 4,076 ಕೋಟಿ ರೂ.

ರೊಟೋಮ್ಯಾಕ್ ಗ್ಲೋಬಲ್ – 2,850 ಕೋಟಿ ರೂ.
ಕುಡೋಸ್ ಕೆಮಿ, ಪಂಜಾಬ್ – 2,326 ಕೋಟಿ ರೂ.
ರುಚಿ ಸೋಯಾ ಇಂಡಸ್ಟ್ರೀಸ್ – 2,212 ಕೋಟಿ ರೂ.
ಜೂಮ್ ಡೆವಲಪರ್ಸ್ – 2,012 ಕೋಟಿ ರೂ.
ಕಿಂಗ್‍ಫಿಶರ್ ಏರ್‍ಲೈನ್ಸ್ – 1,943 ಕೋಟಿ ರೂ.
ಫಾರೆವರ್ ಪ್ರಿಶಿಯಸ್ ಜುವೆಲ್ಲರಿ -1,962 ಕೋಟಿ ರೂ.

ಒಟ್ಟು 18 ಕಂಪನಿಗಳು 1 ಸಾವಿರ ಕೋಟಿ ಸಾಲ ಮಾಡಿದ್ದರೆ 25 ಕಂಪನಿಗಳು 1 ಸಾವಿರ ಕೋಟಿ ರೂ.ಗಿಂತ ಕಡಿಮೆ ಸಾಲ ಮಾಡಿದೆ. 50 ಮಂದಿ ಸುಸ್ತಿದಾರರ ಪೈಕಿ 6 ಮಂದಿ ವಜ್ರ ಮತ್ತು ಚಿನ್ನದ ಉದ್ಯಮಗಳನ್ನು ನಡೆಸಿದವರಾಗಿದ್ದಾರೆ.

ರೈಟಾಫ್ ಎಂದರೇನು?
ಸರ್ಕಾರಗಳು ರೈತರ ಸಾಲಮನ್ನಾ ಮಾಡಿದಂತೆ ಉದ್ಯಮಿಗಳ ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡುವುದಿಲ್ಲ. ಕೋಟ್ಯಂತರ ರೂ ಸಾಲ ಮಾಡಿ ದೇಶ ತೊರೆದ ಉದ್ಯಮಿಗಳನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಬ್ಯಾಂಕುಗಳು ಮೊದಲೇ ಗುರುತಿಸುತ್ತದೆ. ಸಾಲ ಪಾವತಿಸದೇ ಇದ್ದರೆ ಕೋಟ್ಯಂತರ ರೂ. ಸಾಲ ಬ್ಯಾಲೆನ್ಸ್ ಶೀಟ್ ನಲ್ಲಿ ಹಾಗೆಯೇ ಇರುತ್ತದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆದು ಹಾಕಲು ರೈಟಾಫ್ ಮಾಡುತ್ತದೆ. ರೈಟಾಫ್ ಮಾಡಿದರೂ ಉದ್ಯಮಿಗಳ ಸಾಲ ವಸೂಲಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ವಂಚನೆಗೈದವರ ವಿರುದ್ಧ ತನಿಖೆ ನಡೆಸುತ್ತಿರುತ್ತದೆ. ಮುಂದೆ ಈ ಸಾಲ ವಸೂಲಾದರೆ ಲೆಕ್ಕಪತ್ರದಲ್ಲಿ ಅದನ್ನು ಲಾಭ ಎಂಬುದಾಗಿ ತೋರಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *