ಬೆಂಗಳೂರು: ಎರಡನೇ ಶನಿವಾರ ಕೆಲಸಕ್ಕೆ ರಜೆ. ಹೀಗಾಗಿ ಖುಷಿಯಿಂದ ಗೆಳೆಯರನ್ನ ಮಾತನಾಡಿಸಿಕೊಂಡು ಬರೋಣ ಎಂದು ಹೊರಟವನಿಗೆ ಕ್ರಷರ್ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ಇಬ್ಬಲೂರು ಜಂಕ್ಷನ್ ಬಳಿ ನಡೆದಿದೆ.
ದೊಡ್ಡಮುನಿಯಪ್ಪ ಮೃತ ದುರ್ದೈವಿ. ಮುನಿಯಪ್ಪ ಸರ್ಜಾಪುರ ರಸ್ತೆಯ ಇಬ್ಬಲೂರು ನಿವಾಸಿಯಾಗಿದ್ದು, ಖಾಸಗಿ ಬ್ಯಾಂಕೊಂದರ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಸೆಕೆಂಡ್ ಸಾಟರ್ಡೆ ಬ್ಯಾಂಕ್ ಗೆ ರಜೆ ಇರುವುದರಿಂದ ಗೆಳೆಯರನ್ನ ಭೇಟಿಯಾಗಿ ಬರುತ್ತೀನಿ ಎಂದು ಬೆಳಗ್ಗೆ 9:30ಕ್ಕೆ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದರು. ಆದರೆ ಇಬ್ಬಲೂರು ಜಂಕ್ಷನ್ ಮುಖ್ಯರಸ್ತೆ ಬಳಿ ಬಂದು ರಸ್ತೆ ದಾಟಲು ಯತ್ನಿಸುವ ವೇಳೆಯಲ್ಲಿ ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಕ್ರಷರ್ ಲಾರಿ ಡಿಕ್ಕಿಯಾಗಿದೆ. ಪರಿಣಾಮ ನಮ್ಮ ತಂದೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ಮೃತನ ಮಗಳು ರೇಣುಕಾ ಹೇಳಿದ್ದಾರೆ.
ಇನ್ನು ಲಾರಿ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜನ್ನ ಪುಡಿ ಪುಡಿ ಮಾಡಿ, ರಸ್ತೆ ತಡೆ ನಡೆಸಿದ್ದರು. ಹೀಗಾಗಿ ಬೆಳ್ಳಂದೂರು, ಸರ್ಜಾಪುರ ಮುಖ್ಯರಸ್ತೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್‍ಗೂ ಹೆಚ್ಚು ದೂರ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ಬೆಳ್ಳಂದೂರು ಸುತ್ತಮುತ್ತ ಐಟಿ ಕಂಪನಿಗಳು ಹೆಚ್ಚಾಗಿದ್ದು, ಐಟಿ ಕಂಪನಿಗಳ ಮುಂದೆ ಸ್ಕೈ ವಾಕ್ ನಿರ್ಮಿಸಿರುವ ಬಿಬಿಎಂಪಿ ಇಬ್ಬಲೂರು ಬಳಿ ಸ್ಕೈ ವಾಕ್ ನಿರ್ಮಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ರು.
ಸದ್ಯ ಈ ಘಟನೆ ಸಂಬಂಧ ಹೆಚ್.ಎಸ್.ಆರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv