ಬಳ್ಳಾರಿ: ತನ್ನ ಸಾವಿಗೆ ಬ್ಯಾಂಕ್ ಮ್ಯಾನೇಜರ್ ನೀಡುತ್ತಿದ್ದ ಕಿರುಕುಳ ಕಾರಣ ಎಂದು ವಿಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಜ್ಞಾನ ಗಂಗೋತ್ರಿ ಶಾಖೆಯ ಸಿಬ್ಬಂದಿ ಕೃಷ್ಣಾರೆಡ್ಡಿ ಆತ್ಮಹತ್ಮೆಗೆ ಶರಣಾದ ದುರ್ದೈವಿ. ಮ್ಯಾನೇಜರ್ ಡಿ.ಎಸ್. ಶಿವಪ್ರಸಾದ್ ಕಿರುಕುಳ ತಾಳಲಾರದೇ ಕೃಷ್ಣಾರೆಡ್ಡಿ ಮೊಬೈಲ್ ನಲ್ಲಿ ಸೆಲ್ಫೀ ವಿಡಿಯೋ ಮಾಡಿಟ್ಟು ಎಚ್.ಎಲ್.ಸಿ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಸೋಮವಾರ ನಡೆದಿದ್ದು, ಗುರುವಾರ ಕೃಷ್ಣಾರೆಡ್ಡಿಯ ಶವ ಪತ್ತೆಯಾಗಿದೆ. ಘಟನೆಯ ನಂತರ ಕೃಷ್ಣಾರೆಡ್ಡಿ ಕುಟುಂಬದವರು ತಮ್ಮ ಮಗನ ಸಾವಿಗೆ ಬ್ಯಾಂಕ್ ಮ್ಯಾನೇಜರ್ ಕಾರಣವೆಂದು ದೂರು ದಾಖಲಿಸಿದ್ದಾರೆ.
ಘಟನೆ ಕುರಿತು ಬಳ್ಳಾರಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾಂಕ್ ಮ್ಯಾನೇಜರ್ ಯಾವ ರೀತಿ, ಯಾವ ವಿಷಯಕ್ಕೆ ಕಿರುಕುಳ ನೀಡುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.