ರಾಯಚೂರಿನ ಈ ಬ್ಯಾಂಕ್‍ನಲ್ಲಿ ಸಾಲ ಮಾತ್ರವಲ್ಲ ನೀರಾ ಕೂಡ ಸಿಗುತ್ತೆ

Public TV
1 Min Read

– ಗ್ರಾಹಕರಿಗೆ ನೀರಾ ಹಂಚುವ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್

ರಾಯಚೂರು: ಗ್ರಾಹಕರನ್ನ ಸೆಳೆಯಲು ಹಾಗೂ ಲಾಭದ ಖುಷಿ ಹಂಚಿಕೊಳ್ಳಲು ವ್ಯಾಪಾರಿಗಳು, ಕಂಪನಿಗಳು ಏನೇನೊ ಪ್ರಯತ್ನಗಳನ್ನ ಮಾಡುತ್ತವೆ. ಆದ್ರೆ ರಾಯಚೂರಿನಲ್ಲಿ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ತನ್ನ 25ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನೀರಾ ವಿತರಿಸುತ್ತಿದೆ.

ಬ್ಯಾಂಕಿನೊಳಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೂ ನೀರಾ ಬಾಟಲ್‍ಗಳನ್ನ ಬ್ಯಾಂಕ್ ಸಿಬ್ಬಂದಿ ಕೈಗೆ ಇಡುತ್ತಿದ್ದಂತೆ ಗ್ರಾಹಕರು ಗಾಬರಿಗೊಂಡಿದ್ದಾರೆ. ಆದರೆ ಇದು ತೆಂಗಿನಮರದ ನೀರಾ, ಝೀರೋ ಪರ್ಸೆಂಟ್ ಆಲ್ಕೋಹಾಲ್ ಮತ್ತು ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿಸಿದ ಮೇಲೆ ಗ್ರಾಹಕರು ತೆಗೆದುಕೊಂಡು ಕುಡಿದರು.

ನೀರಾ ಪ್ರಚಾರಕ್ಕಾಗಿ ಬ್ಯಾಂಕ್ ಮುಂದೆ ಬ್ಯಾನರ್ ಕೂಡ ಹಾಕಲಾಗಿದೆ. ಶಿವಮೊಗ್ಗ ಮೂಲದ ಕಂಪನಿಯ ನೀರಾ ಹೆಚ್ಚು ಕಡಿಮೆ ತೆಂಗಿನ ನೀರಿನ ತರಹವೇ ಇದ್ದು, ಸ್ವಲ್ಪ ಸಪ್ಪೆ ಇದೆ. ಆದರೆ ಈ ನೀರಾವನ್ನ ಬ್ಯಾಂಕ್‍ನವರು ಯಾಕೆ ಪ್ರಚಾರ ಮಾಡುತ್ತಿದ್ದಾರೆ ಅನ್ನೋದು ಗ್ರಾಹಕರ ಗೊಂದಲಕ್ಕೆ ಕಾರಣವಾಗಿದೆ.

ಈ ಹಿಂದೆ ಈಚಲು ಮರದಿಂದ ನೀರಾವನ್ನ ತೆಗೆದು ಮಾರಾಟ ಮಾಡುತ್ತಿದ್ದ ರೈತ ಲಕ್ಷ್ಮಣ ಗೌಡ ಕಡಗಂದೊಡ್ಡಿ ನೀರಾಗೆ ಹೇಗೆ ಅನುಮತಿ ಸಿಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೂ ಅವಕಾಶ ಕೊಟ್ಟರೆ ಈಚಲು ಮರದಿಂದ ಝೀರೋ ಪರ್ಸೆಂಟ್ ಆಲ್ಕೋಹಾಲ್ ನೀರಾ ತಯಾರಿಸುತ್ತೇವೆ ಎನ್ನುತ್ತಿದ್ದಾರೆ. ಅದೇನೆ ಇರಲಿ ಚಳಿಗಾಲದಲ್ಲಿ ಸುಕೋ ಬ್ಯಾಂಕ್‍ಗೆ ಹೋಗುವ ಗ್ರಾಹಕರಿಗೆ ಸಖತ್ ನೀರಾ ಅಂತೂ ಸಿಗುತ್ತಿದೆ.

ಇದು ವಿಟಮಿನ್ ಬಿ+, ಸಿ, ಡಿ ಹೊಂದಿರುವ ಏಕೈಕ ಪೇಯಾ, ಮಧುಮೇಯ ಸ್ನೇಹಿ, 17 ಅಮೈನೋ ಆಸಿಡ್‍ಗಳನ್ನ ಹೊಂದಿದೆ ಅಂತೆಲ್ಲಾ ನೀರಾ ಬಗ್ಗೆ ಪ್ರಚಾರ ಮಾಡಲಾಗಿದೆ. ಆದರೆ ನೀರಾ ಬಾಟಲಿ ಮೇಲೆ ಎಕ್ಸಪೈಯರಿ ಡೇಟ್ ಇಲ್ಲ. ಈ ಹಿಂದೆ ರಾಯಚೂರಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ನೀರಾ ಕೊಟ್ಟಿದ್ದು, ದೊಡ್ಡ ಸುದ್ದಿಯಾಗಿತ್ತು. ಈಗ ಬ್ಯಾಂಕ್‍ನಲ್ಲಿ ನೀರಾ ಕೊಡುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *