ಮುಂಬೈ: ನಕಲಿ ದಾಖಲೆ (Fake Documents) ಬಳಸಿಕೊಂಡು ಕಳೆದ 30 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ (Bangladesh) ಮೂಲದ ತೃತೀಯಲಿಂಗಿಯನ್ನ ಮುಂಬೈನಲ್ಲಿ ಪೊಲೀಸರು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನ ಆರೋಪಿ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ, ಅಲಿಯಾಸ್ ‘ಗುರು ಮಾ’ (Guru Maa) ಎಂದು ಗುರುತಿಸಲಾಗಿದೆ. ಗುರು ಮಾ ಸುಮಾರು 200 ಬಾಂಗ್ಲಾ ಪ್ರಜೆಗಳನ್ನ ಭಾರತಕ್ಕೆ ಕಳ್ಳಸಾಗಣೆ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಮುಂಬೈ ಪೊಲೀಸರು (Mumbai Police) ತನಿಖೆ ಚುರುಕುಗೊಳಿಸಿದ್ದಾರೆ. ಕಳ್ಳಸಾಗಣೆ ಮಾಡಿರುವ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂದು ಶಂಕಿಸಿದ್ದಾರೆ.
300 ಅನುಯಾಯಿ ಹೊಂದಿದ್ದ ಆಧ್ಯಾತ್ಮಿಕ ನಾಯಕಿ:
ಜ್ಯೋತಿ ಮುಂಬೈನಲ್ಲಿರುವ ಟ್ರಾನ್ಸ್ (Trans) ಜನರಿಗೆ ʻಗುರು ಮಾʼ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಳು. ತಾನೊಬ್ಬಳು ಆಧ್ಯಾತ್ಮಿಕ ನಾಯಕಿ ಎಂದು ಹೇಳಿಕೊಂಡಿದ್ದಳು. ಹೀಗಾಗಿ ವಿವಿಧ ನಗರಗಳಲ್ಲಿ ಆಕೆಗೆ 300 ಜನ ಅನುಯಾಯಿಗಳಿದ್ದರು. ಅಲ್ಲದೇ ತಾನು ಭಾರತೀಯ ಪ್ರಜೆ ಎಂದು ಹೇಳಿಕೊಂಡಿದ್ದಳು. ಅದಕ್ಕಾಗಿ ನಕಲಿ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನ ನಕಲು ಮಾಡಿದ್ದಳು. ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ ಬಳಿಕ ಇದ್ದ ದಾಖಲೆಗಳು ನಕಲಿ ಅನ್ನೋದು ಗೊತ್ತಾಗಿದೆ.
ಕಳ್ಳಸಾಗಣೆ ಮಾಡ್ತಿದ್ದು ಹೇಗೆ?
ತನಿಖಾಧಿಕಾರಿ ಮೂಲಗಳ ಪ್ರಕಾರ, ಗುರು ಮಾ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಗಡಿಯ ಮೂಲಕ ಭಾರತಕ್ಕೆ ಅಕ್ರಮವಾಗಿ ಕರೆತರುತ್ತಿದ್ದಳು. ಬಾಂಗ್ಲಾದಿಂದ ಕರೆತಂದು ಮುಂಬೈನ ಶಿವಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿರಿಸಿದ್ದಳು. ಅವರಿಂದ ಪ್ರತಿ ತಿಂಗಳು 5 ರಿಂದ 10 ಸಾವಿರ ರೂ. ವರೆಗೂ ಬಾಡಿಗೆ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MHADA) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದ ಫ್ಲ್ಯಾಟ್ ಹಾಗೂ ಮನೆಗಳನ್ನ ಅತಿಕ್ರಮಣ ಮಾಡಿಕೊಂಡು, ಅಲ್ಲಿಯೇ ಕಳ್ಳಸಾಗಣೆ ಮೂಲಕ ಕರೆತಂದವರನ್ನ ಬಾಡಿಗೆಗೆ ಇರಿದ್ದಳೆಂದು ಹೇಳಲಾಗಿದೆ. ಸದ್ಯ ಈ ಕುರಿತು ಮುಂಬೈ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.